ಕದ್ರಿಯ ಕರ್ನಾಟಕ ಒನ್ ಕಚೇರಿ ಅವ್ಯವಸ್ಥೆ: ಹೋರಾಟಗಾರ ಜೆರಾರ್ಡ್ ಟವರ್ಸ್ ವಿಭಿನ್ನ ಪ್ರತಿಭಟನೆ

Update: 2023-11-25 07:15 GMT

ಮಂಗಳೂರು, ನ. 25: ಸರಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಸಾರ್ವಜನಿಕರಿಗೆ ನಾನಾ ರೀತಿಯ ರೀತಿಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಕದ್ರಿಯ ಕರ್ನಾಟಕ ಒನ್ ಕಚೇರಿ ಅವ್ಯವಸ್ಥೆಗಳ ಆಗರವಾಗಿದೆ ಎಂದು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಅವರು ಶನಿವಾರ ಕಚೇರಿಯಲ್ಲೇ ವಿಭಿನ್ನ ರೀತಿಯ ಪ್ರತಿಭಟನೆಯ ಮೂಲಕ ಗಮನ ಸೆಳೆದರು.

ಬಿಲ್ ಪಾವತಿಗಾಗಿ ಕಚೇರಿ ಒಳ ಹೋದ ಜೆರಾರ್ಡ್ ಟವರ್ಸ್ ಅವರು ಸೂಕ್ತ ಗಾಳಿಯ (ವೆಂಟಿಲೇಶನ್) ವ್ಯವಸ್ಥೆ ಇಲ್ಲದೆ ಮೂರ್ಚೆ ಹೋದಾಗ ಅಲ್ಲಿದ್ದ ಸಾರ್ವಜನಿಕರು ಅವರನ್ನು ನೀರು ಕುಡಿಸಿ ಉಪಚರಿಸಿದರು.

‘ಸಾಮಾಜಿಕ ಹೋರಟಗಾರನಾಗಿ ಕಳೆದ ಹಲವು ದಶಕದಿಂದ ಮಂಗಳೂರು ನಗರದ ಅಭಿವೃದ್ಧಿ ವಿಚಾರದಲ್ಲಿ ಧ್ವನಿ ಎತ್ತುತ್ತಿರುವ ನಾನು ಜನರ ಸಮಸ್ಯೆಗಳಿಗಾಗಿ ಇಂದು ಮೂರ್ಛೆ ಹೋಗುವ ನಾಟಕ ಆಡಬೇಕಾಗಿ ಬಂತು. ಈ ಕಚೇರಿಯಲ್ಲಿ ಕಳೆದ ಹಲವು ಸಮಯದಿಂದ ಹಲವಾರು ಮಂದಿ ಇದೇ ರೀತಿ ನೈಜವಾಗಿ ಮೂರ್ಛೆ ಹೋದಾಗ ನಾನು ಸೇರಿದಂತೆ ಹಲವು ಸಾರ್ವಜನಿಕರು ಉಪಚರಿಸಿದ್ದೇವೆ. ಇಲ್ಲಿನ ಅವ್ಯವಸ್ಥೆಯ ಬಗ್ಗೆ ಕಳೆದ ಸುಮಾರು ನಾಲ್ಕೈದು ತಿಂಗಳಿನಿಂದ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಕ್ರಮವಾಗಿಲ್ಲ’ ಎಂದು ಜೆರಾರ್ಡ್ ಟವರ್ಸ್ ಬಳಿಕ ಸುದ್ದಿಗಾರರ ಜತೆ ತಮ್ಮ ಅನಿಸಿಕೆ ಹಂಚಿಕೊಂಡರು.

‘ಕಚೇರಿಯ ಎಸಿ ಹಾಳಾಗಿ ಸುಮಾರು 10 ತಿಂಗಳು ಕಳೆದಿದೆ. ಕಚೇರಿಯಲ್ಲಿ ಪ್ರಾಕೃತಿಕ ಗಾಳಿ ಬರಲು ಕಿಟಕಿಗಳೇ ಇಲ್ಲ. ಇಲ್ಲಿ ದಿನವೊಂದಕ್ಕೆ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು, ವಿಕಲಚೇತನರು ಸೇರಿದಂತೆ ನೂರಾರು ಮಂದಿ ಸಾರ್ವಜನಿಕರು ನಾನಾ ರೀತಿಯ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ. ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ದಿನದಲ್ಲಿ ಗಂಟೆಯೊಂದಕ್ಕೆ ಸುಮಾರು 300ರಷ್ಟು ಮಂದಿ ಇಲ್ಲಿ ಅರ್ಜಿ ಸಲ್ಲಿಸುವುದನ್ನು ಕಂಡಿದ್ದೇನೆ. ಹಾಗಿದ್ದರೂ ಇಲ್ಲಿ ಕುಡಿಯಲು ನೀರಿಲ್ಲ. ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ. ಬರೆಯಲು ಟೇಬಲ್ ವ್ಯವಸ್ಥೆ ಇಲ್ಲ. ಕಚೇರಿ ಹೊರಗಡೆ ಸ್ವಚ್ಛತೆ ಇಲ್ಲ’ ಎಂದು ಆರೋಪಿಸಿದರು.

ಕರ್ನಾಟಕ ಒನ್ ಕಚೇರಿಯ ನಿರ್ವಹಣೆ ಮಾಡುತ್ತಿದ್ದ ಹಿಂದಿನ ಸಂಸ್ಥೆ ಇಲ್ಲಿ ದುಡಿಯುವವರಿಗೆ ಸರಿಯಾಗಿ ವೇತನ ನೀಡದೆ ಸತಾಯಿಸುತ್ತಿದ್ದ ಸಂದರ್ಭದಲ್ಲಿಯೂ ನಾನು ಧ್ವನಿ ಎತ್ತಿದ್ದೆ. ಸಾರ್ವಜನಿಕರಿಗೆ ಪಾಲಿಕೆ ಕಚೇರಿಯಿಂದ ಹೊರಗಡೆ ವಿವಿಧ ರೀತಿಯ ಬಿಲ್ ಪಾವತಿ ಸೇರಿದಂತೆ ಸರಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಈ ಪರಿಕಲ್ಪನೆ 14 ವರ್ಷಗಳ ಹಿಂದೆ ಆರಂಭಗೊಂಡಿತ್ತು.  ಹಿಂದಿನ ಗುತ್ತಿಗೆದಾರರು 300 ಕೋಟಿ ರೂ. ಹಣ ದೋಚಿ ಪರಾರಿಯಾಗಿದ್ದರು. ಬಳಿಕ ಕರ್ನಾಟಕ ಒನ್ ಎಂದು ಹೆಸರು ಬದಲಾಗಿ ಹೊಸ ಗುತ್ತಿಗೆ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದೆ. ಕದ್ರಿಯ ಈ ಕರ್ನಾಟಕ ಒನ್ ಕಚೇರಿಯಲ್ಲಿನ ಎಸಿ ಹಾಳಾಗಿರುವ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಮೂರು ತಿಂಗಳಾದರೂ ಕ್ರಮವಾಗಿಲ್ಲ’ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಜಿ.ಕೆ. ಭಟ್ ಅವರೂ ಈ ವಿನೂತನ ಪ್ರತಿಭಟನೆಯಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News