ಜ.18- 19ರಂದು ತಣ್ಣೀರುಬಾವಿಯಲ್ಲಿ ಗಾಳಿಪಟ ಉತ್ಸವ; 11 ದೇಶಗಳ ಗಾಳಿಪಟ ತಂಡಗಳು ಭಾಗಿ
ಮಂಗಳೂರು, ಜ. 16: ಮಂಗಳೂರಿನ ಕಡಲ ಕಿನಾರೆ ಮತ್ತೊಂದು ಅಂತಾರಾಷ್ಟ್ರೀಯ ಉತ್ಸವಕ್ಕೆ ಸಜ್ಜಾಗಿದೆ. ಈಗಾಗಲೇ ದೇಶ ವಿದೇಶದಲ್ಲಿ ಗಾಳಿಪಟಗಳ ಮೂಲಕ ಖ್ಯಾತಿ ಪಡೆದಿರುವ ಟೀಮ್ ಮಂಗಳೂರು ನೇತೃತ್ವದಲ್ಲಿ ಜ. 18 ಮತ್ತ 19ರಂದು ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯಲಿದ್ದು, 11 ದೇಶಗಳು ಗಾಳಿಪಟ ತಂಡಗಳ ಜತೆಗೆ ಒರಿಸ್ಸಾ, ಕೇರಳ, ತೆಲಂಗಾಣ, ರಾಜಸ್ತಾನ, ಮಹಾರಾಷ್ಟ, ಗುಜರಾತ್‌ನ ಗಾಳಿಪಟ ತಂಡಗಳೂ ವೈವಿಧ್ಯಮಯ ಗಾಳಿಪಟಗಳೊಂದಿಗೆ ಮಂಗಳೂರಿನ ಕಡಲ ಬಾನಂಗಳದಲ್ಲಿ ಎರಡು ದಿನಗಳ ಕಾಲ ಚಿತ್ತಾರ ಮೂಡಿಸಲಿದ್ದಾರೆ.
ಕುಡ್ಲದ ‘ಕಥಕಳಿ’ ವಿದೇಶದ ಬಾನಂಗಳಕ್ಕೆ ಹಾರಿದ್ದೇ ರೋಚಕ!
ಮಂಗಳೂರಿನ ಅಶೋಕ ನಗರದ ಸರ್ವೇಶ್ ರಾವ್‌ಗೆ ಬಾಲ್ಯದಿಂದಲೂ ಗಾಳಿಪಟ ಹಾರಿಸುವ ಹವ್ಯಾಸ. ಈ ಹವ್ಯಾಸವನ್ನು ತನ್ನ ವೃತ್ತಿ ಜೊತೆಗೆ ಪ್ರವೃತ್ತಿಯಾಗಿ ಬೆಳೆಸಿಕೊಂಡೇ ಬರುತ್ತಾ ಗಾಳಿಪಟ ಹಾರಾಟದ ಆಯಾಮಗಳನ್ನು ಕಲಿಯುತ್ತಾ ಬಂದವರು. ಪರಿಸರ ಪ್ರೇಮಿಯೂ ಆಗಿರುವ ಸರ್ವೇಶ್ ಚಾರಣಕ್ಕೆ ತೆರಳಿದ್ದ ವೇಳೆ ಬೆಟ್ಟದ ಮೇಲೆ ಗಾಳಿಪಟ ಹಾರಿಸುತ್ತಿದ್ದನ್ನು ಕಂಡು ಚಾರಣಿಗ ಹಾಗೂ ಚಿತ್ರ ಕಲಾವಿದರೂ ಆಗಿರುವ ದಿನೇಶ್ ಹೊಳ್ಳ ಗಾಳಿಪಟ ವಿನ್ಯಾಸಕರರಾಗಿ ಸರ್ವೇಶ್ ಜತೆಗೂಡಿದರು.
ಇವರ ಜತೆಗೂಡಿದ ಗಿರಿಧರ್ ಕಾಮತ್, ಪ್ರಶಾಂತ್ ಉಪಾಧ್ಯಯ, ವಿ.ಕೆ.ಸನಿಲ್, ಸತೀಶ್ ರಾವ್, ನರೇಂದ್ರ, ಅರುಣ್‌ರನ್ನು ಒಳಗೊಂಡ ಸಮಾನ ಮನಸ್ಕರ ‘ಟೀಮ್ ಮಂಗಳೂರು’ ಹವ್ಯಾಸಿ ಗಾಳಿಪಟ ತಂಡವಾಗಿ ರೂಪುಗೊಂಡಿತು. ಆರಂಭದಲ್ಲಿ ಸಣ್ಣ ಸಣ್ಣ ಗಾಳಿಪಟ ಮಾಡುತ್ತಿದ್ದ ತಂಡವು ಗುಜರಾತ್ ನ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೋಗಲು ಆರಂಭವಾದ ನಂತರ ದೊಡ್ಡ ಗಾತ್ರದ ಮತ್ತು ಹಾರಿಸುವ ತಂತ್ರಗಾರಿಕೆಯನ್ನೂ ಕಲಿತುಕೊಂಡು ವಿದೇಶೀ ಗಾಳಿಪಟ ತಂಡಗಳ ಪರಿಚಯ ಬೆಳೆಸಿತು. ಒಂದು ದಿನ ತಂಡದ ಎಲ್ಲರೂ ದೊಡ್ಡದೊಂದು ಗಾಳಿಪಟ ಮಾಡಬೇಕೆಂಬ ಮಾತುಕತೆ ನಡೆದು 36 ಅಡಿ ಎತ್ತರದ ಬ್ರಹತ್ ಗಾಳಿಪಟ ರಚಿಸಲು ನಿರ್ಧರಿಸಿದರು. ಅಲ್ಲಿವರೆಗೆ ಕೊಡೆಗಾಗಿ ಉಪಯೋಗಿಸುವ ಬಟ್ಟೆಯಲ್ಲಿ ಗಾಳಿಪಟ ಮಾಡುತ್ತಿದ್ದ ತಂಡಕ್ಕೆ ಗಾಳಿಪಟ ರಚಿಸಲು ‘ರಿಪ್ ಸ್ಟಾಪ್ ನೈಲಾನ್ ’ ಎಂಬ ಬಟ್ಟೆ ಯುರೋಪ್ ದೇಶಗಳಲ್ಲಿ ಸಿಗಲಿದೆ ಎಂಬುವುದು ತಿಳಿಯಿತು. ಸರ್ವೇಶ್ ಅದನ್ನು ಅಲ್ಲಿಂದ ತರಿಸಿಕೊಂಡರು. ದಿನೇಶ್ ಹೊಳ್ಳ ಕಥಕಳಿ ವಿನ್ಯಾಸ ಮತ್ತು ಬಣ್ಣ ಸಂಯೋಜನೆ ಮಾಡಿದರೆ, ಪ್ರಶಾಂತ್ ಬಾನಂಗಳದಲ್ಲಿ ಗಾಳಿಪಟ ಹಾರಿಕೆಯ ಲೆಕ್ಕಾಚಾರವನ್ನು ಪೂರ್ಣಗೊಳಿಸಿದರು. ಗಿರಿಧರ್ ಕಾಮತ್ ಮೇಲ್ವಿಚಾರಕರಾಗಿ ಗಾಳಿಪಟ ರಚನೆ ಆರಂಭಗೊಂಡಿತು. ರಿಪ್ ಸ್ಟಾಪ್ ಬಟ್ಟೆಯನ್ನು ಆಕಾರಕ್ಕೆ ತಕ್ಕ ಕತ್ತರಿಸಿ ಆಂಟಿಸಿ, ಹೊಲಿದು ಮಾಡುವ ಈ ಆಪ್ಲಿಕ್ ( ಕೋಲಾಜ್ ) ಕೆಲಸ ಸತತವಾಗಿ ಒಂದು ತಿಂಗಳು ( ರಾತ್ರೆ ಮಾತ್ರ ) ನಡೆಯಿತು. 18 ಸೂತ್ರ ಕಟ್ಟಿ ಪಣಂಬೂರು ಕಡಲ ಕಿನಾರೆಯಲ್ಲಿ ಪ್ರಾಯೋಗಿಕ ಹಾರಾಟ ನಡೆಸಿದಾಗ ‘ಕಥಕಳಿ’ ಬಾನಿನ ಎತ್ತರದಲ್ಲಿ ಹಾರುತ್ತಾ ಸಾಗಿತು. ಈ ಕಥಕಳಿ ಗಾಳಿಪಟವು 2005 ರಲ್ಲಿ ಭಾರತದಲ್ಲೇ ಅತೀ ದೊಡ್ಡ ಗಾಳಿಪಟವೆಂದು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲೆ ಸೃಷ್ಟಿಸಿತು. ಈ ದಾಖಲೆಯು ಟೀಮ್ ಮಂಗಳೂರು ತಂಡದ ವರ್ಚಸ್ಸನ್ನು ಬದಲಿಸಿ, 2006 ರಿಂದ ನಿರಂತರವಾಗಿ ಫ್ರಾನ್ಸ್ ( 7 ಬಾರಿ ) ಇಂಗ್ಲೆಂಡ್, ಕೆನಡಾ, ಇಟೆಲಿ, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್, ಥೈಲ್ಯಾಂಡ್, ಇಂಡೋನೆಷ್ಯ, ಶ್ರೀಲಂಕಾ, ದುಬಾಯಿ, ಕತಾರ್ ದೇಶಗಳ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ( ಯಕ್ಷಗಾನ, ಪುಷ್ಪಕ ವಿಮಾನ, ಭರತನಾಟ್ಯಮ್, ಕೋಳಿ ಕಟ್ಟ, ಗಣಪತಿ, ಭಾರತೀಯ ದಂಪತಿ, ಗರುಡ, ಭೂತದ ಕೋಲ ಮೊದಲಾದ ಬೃಹತ್ ಗಾಳಿಪಟಗಳ ಮೂಲಕ ) ವಿದೇಶಗಳ ಬಾನಿನಲ್ಲಿ ಹಾರಿಸಿ ್ಮ ತಂಡವು ಅಂತಾರಾಷ್ಟ್ರೀಯವಾಗಿ ಮನ್ನಣೆ ಪಡೆಯಿತು.
ತಂದೆ ಜತೆ ಪುಟಾಣಿ ಅಕ್ಷರ ಹಾರಿಸಲಿದ್ದಾಳೆ ಪುಟ್ಟ ಗಾಳಿಪಟ
ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ದೇಶ ವಿದೇಶಗಳ ಗಾಳಿಪಟ ತಜ್ಞರು ಭಾಗವಹಿಸಿ ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸುವ ಜತೆಗೆ ಈ ಬಾರಿ ಸಾರ್ವಜನಿಕರ ನೆಲೆಯಲ್ಲಿ 1ನೆ ತರಗತಿಯ ಪುಟಾಣಿಯೂ ಗಾಳಿಪಟ ಹಾರಿಸಲು ಸಿದ್ಧತೆ ನಡೆಸಿದ್ದಾಳೆ.
ಕೆಎಸ್‌ಆರ್‌ಟಿಸಿ ಉದ್ಯೋಗಿಯಾಗಿರುವ ಸುರತ್ಕಲ್‌ನ ಅಮಿತ್ ಕುಮಾರ್ ಅವರ ಪುತ್ರಿ ಅಕ್ಷರ ಎಂಬಾಕೆಯೂ ತಂದೆಯ ಜತೆ ಸೇರಿ ಪುಟ್ಟ ಗಾಳಿಪಟವನ್ನು ತಯಾರಿಸಿದ್ದು, ಉತ್ಸವದಲ್ಲಿ ಹಾರಿಸಲಿದ್ದಾರೆ ಎಂದು ಟೀಮ್ ಮಂಗಳೂರು ತಂಡದ ಕಲಾವಿದ ದಿನೇಶ್ ಹೊಳ್ಳ ತಿಳಿಸಿದ್ದಾರೆ.
ಅಮಿತ್ ಕುಮಾರ್‌ರವರು ಸ್ವ ಆಸಕ್ತಿಯಿಂದ ತಂಡದಿಂದ ಗಾಳಿಪಟ ತಯಾರಿಕೆ, ಹಾರಿಸುವ ಬಗೆ ಬಗ್ಗೆ ಮಾಹಿತಿ ಪಡೆದು ಗಾಳಿಪಟಗಳನ್ನು ತಯಾರಿಸಿದ್ದು, ಮಗಳ ಜತೆ ಉತ್ಸವದಲ್ಲಿ ತಾವು ತಯಾರಿಸಿದ ಗಾಳಿಪವನ್ನು ಹಾರಿಸಲಿದ್ದಾರೆ. ಗಾಳಿಪಟದ ಬಗ್ಗೆ ಸಾರ್ವಜನಿಕವಾಗಿಯೂ ಈ ರೀತಿಯಲ್ಲಿ ಸಾಕಷ್ಟು ಆಸಕ್ತಿ ಕಂಡುಬರುತ್ತಿದೆ ಎನ್ನುತ್ತಾರೆ ದಿನೇಶ್ ಹೊಳ್ಳ.