ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಕ್ಕೆ ಹೆಚ್ಚು ಹೊತ್ತು ನೀಡಲು ಶಾಸಕ ಭರತ್ ಶೆಟ್ಟಿ ಸೂಚನೆ
ಮಂಗಳೂರು, ಜ.16: ಮಂಗಳೂರು ನಗರ ಶಿಕ್ಷಣದ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ದ.ಕ. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಆಗಮಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಇನ್ನಷ್ಟು ಹಾಸ್ಟೆಲ್‌ಗಳ ಆವಶ್ಯಕತೆ ಇದೆ. ಆದ ಕಾರಣ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಐದು ವರ್ಷಗಳಿಗೆ ಯೋಜನೆ ತಯಾರಿಸುವಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ .ಭರತ್ ಶೆಟ್ಟಿ ಸೂಚನೆ ನೀಡಿದ್ದಾರೆ.
ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಸ್ಟೆಲ್ ಸೀಟ್‌ಗಳಿಗೆ ಬೇರೆ ಕಡೆಗಳಿಂದ ಬರುವ ವಿದ್ಯಾರ್ಥಿಗಳಿಂದ ಸಿಗುತ್ತಿಲ್ಲ ಎಂಬ ಕೊರಗು ಇದೆ. ಅದನ್ನು ನಿವಾರಿ ಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ನಾವು ವರ್ಷದಲ್ಲಿ ಎಷ್ಟು ಬೇಡಿಕೆ ಹೆಚ್ಚಾಗುತ್ತದೆ ಎಂಬ ವಿಚಾರವನ್ನು ತಿಳಿದು ಕೊಂಡು ಮುಂದಿನ ಐದು ವರ್ಷಗಳಿಗೆ ಯೋಜನೆ ರೂಪಿಸಬೇಕಾಗಿದೆ.
ಬೇರೆ ಜಿಲ್ಲೆಗಳ ಶಾಸಕರು ಕೂಡಾ ಮಂಗಳೂರಿನ ಶಾಸಕರಲ್ಲಿ ತಮ್ಮಲ್ಲಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟ್ ದೊರಕಿಕೊ ಡುವಂತೆ ಕೇಳುತ್ತಿದ್ದಾರೆ. ಈಗಾಗಲೇ ಬಿಸಿಎಂ ಎರಡು ಹಾಸ್ಟೆಲ್‌ಗಳು ನಿರ್ಮಾಣವಾಗುತ್ತಿದೆ. ಆದರೆ ಅದು ಸಾಲದು ಎಂದರು.
ಜಿಲ್ಲೆಯ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಸೀಟು ಸಿಕ್ಕಿದರೆ ಹೆಚ್ಚು ಅನುಕೂಲವಾಗುತ್ತದೆ. ಕಡಿಮೆ ಖರ್ಚಿನಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಹಾಸ್ಟೆಲ್‌ಗಳ ವ್ಯವಸ್ಥೆಯ ಕಡೆಗೆ ನಾವು ಹೆಚ್ಚು ಗಮನ ನೀಡಬೇಕಾಗಿದೆ. ಹಾಸ್ಟೆಲ್‌ಗಳ ಕಟ್ಟಡ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.
*ಸರಕಾರಿ ಆಯುರ್ವೇದ ಆಸ್ಪತ್ರೆ: ಮಂಗಳೂರಿನಲ್ಲಿ ಸುಸಜ್ಜಿತವಾದ ನೂರು ಹಾಸಿಗೆಯ ಆಯುರ್ವೇದ ಆಸ್ಪತ್ರೆಯ ಅಗತ್ಯತೆ ಇದೆ. ಈಗ ಖಾಸಗಿ ಆಯುರ್ವೇದ ಆಸ್ಪತ್ರೆಗಳು ಚೆನ್ನಾಗಿ ನಡೆಯುತ್ತಿದೆ. ಆನೇಕ ಖಾಸಗಿ ಆಯುರ್ವೇದ ಆಸ್ಪತ್ರೆ ಗಳು ಇದ್ದರೂ ಇಲ್ಲಿನ ಬೇಡಿಕೆ ಈಡೇರಿಕೆ ಸಾಧ್ಯವಾಗುತ್ತಿಲ್ಲ. ರೋಗಿಗಳಿಗೆ ವೈದ್ಯರ ಭೇಟಿಗೆ ಅವಕಾಶ ಬೇಗನೆ ಸಿಗುತ್ತಿಲ್ಲ. ಅಷ್ಟೊಂದು ಬೇಡಿಕೆ ಇದೆ. ಸರಕಾರಿ ಆಯುರ್ವೇದ ಆಸ್ಪತ್ರೆಗೆ ಆಯುಷ್ ಇಲಾಖೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಶಾಸಕ ಭರತ್ ಶೆಟ್ಟಿ ಸಲಹೆ ನೀಡಿದರು.
ಉತ್ತಮ ಸರಕಾರಿ ಆಯುರ್ವೇದ ಆಸ್ಪತ್ರೆ ಇದ್ದರೆ ಸರಕಾರಿ ಆಯುರ್ವೇದ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದೆ ಅನುಕೂಲವಾಗುತ್ತದೆ ಎಂದರು. ಮಲೇರಿಯಾ ನಿಯಂತ್ರಣದಲ್ಲಿದೆ. ಆದರೆ ಡೆಂಗ್ಯು ನಿಯಂತ್ರಣಕ್ಕೆ ಇಲಾಖೆ ಗಮನ ಹರಿಸಬೇಕು ಎಂದು ಹೇಳಿದರು.
ಮಂಗಳೂರು ತಾಲೂಕು ಪಂಚಾಯತ್ ಆಡಳಿತ ಅಧಿಕಾರಿ ರವಿ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ , ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.