ಮೂತ್ರಕೋಶ ಕ್ಯಾನ್ಸರ್‌ಗೆ ವರದಾನವಾದ ಎಸ್‌ಆರ್‌ಟಿ ಚಿಕಿತ್ಸೆ

Update: 2025-01-16 13:21 GMT

ಮಂಗಳೂರು: ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ವಿಶೇಷ ತಜ್ಞರ ತಂಡವು ಸ್ಟೀರಿಯೋಟ್ಯಾಕ್ಟಿಕ್ ರೇಡಿಯೋ ಥೆರಪಿ (ಎಸ್‌ಆರ್‌ಟಿ) ತಂತ್ರಜ್ಞಾನವನ್ನು ಬಳಸಿಕೊಂಡು ಮೂತ್ರಕೋಶದ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆಯನ್ನು ನಡೆಸುವ ಮೂಲಕ ಗಮನಾರ್ಹ ಸಾಧನೆ ಮಾಡಿವೆ.

ಕ್ಲಿನಿಕಲ್ ಹಾಗೂ ಆಡಳಿತ ವಿಭಾಗದ ನಿದೇರ್ಶಕ, ರೇಡಿಯೇಷನ್ ಅಂಕಾಲಜಿ ವಿಭಾಗದ ಹಿರಿಯ ತಜ್ಞ ಡಾ.ಸುರೇಶ್ ರಾವ್ ಮಾರ್ಗದರ್ಶನದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅನೇಕ ಮಂದಿ ರೋಗಿಗಳಿಗೆ ಎಸ್‌ಆರ್‌ಟಿ ಚಿಕಿತ್ಸೆಯನ್ನು ನೀಡಲಾಗಿದೆ. ಡಾ.ವೆಂಕಟರಮಣ ಕಿಣಿ, ಡಾ.ಸನತ್ ಹೆಗಡೆ, ಡಾ.ಕೃಷ್ಣ ಪ್ರಸಾದ್, ಡಾ. ಹೇಮಂತ್ ಕುಮಾರ್, ಡಾ.ಜಲಾಲುದ್ದಿನ್ ಅಕ್ಬರ್, ಡಾ.ರೋಹನ್ ಗಟ್ಟಿ, ಡಾ.ರಿತಿ ಡಿಸಿಲ್ವಾ, ಡಾ.ವಿಶ್ವಪ್ರಿಯಾ ಅವರನ್ನು ಒಳಗೊಂಡ ವಿಶೇಷ ತಜ್ಞರ ತಂಡ ಈ ಸಾಧನೆ ಮಾಡಿದೆ. ರೋಗಿಗಳಿಗೆ ವಿಶೇಷ ಆರೈಕೆ ನೀಡಿ ಅವರು ಸಂಪೂರ್ಣ ಗುಣಮುಖರಾಗುವಂತೆ ಮಾಡುವಲ್ಲಿ ತಜ್ಞರು ಯಶಸ್ವಿಯಾಗಿದ್ದಾರೆ.

ಎಸ್‌ಆರ್‌ಟಿ ಚಿಕಿತ್ಸೆಯನ್ನು ಪಡೆದವರಲ್ಲಿ ವೈದ್ಯಕೀಯ ಶಸ್ತ್ರಚಿಕಿತ್ಸೆ ನಡೆಸಲಾಗದಿರುವ ಹಿರಿಯ ನಾಗರಿಕರು ಹಾಗೂ ಸಂಪೂರ್ಣ ಸಿಸೆಕ್ಟಮಿ (ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಕೋಶವನ್ನು ತೆಗೆಯುವ) ಮತ್ತು ಹೊಸ ಮೂತ್ರಕೋಶ ಅಳವಡಿಕೆ (ರೋಗಿಯ ಕರುಳನ್ನು ಬಳಸಿಕೊಂಡು ಹೊಸ ಮೂತ್ರಕೋಶದ ಸೃಷ್ಟಿ) ಪ್ರಕ್ರಿಯೆಯನ್ನು ಬಯಸದ ಯುವ ರೋಗಿಗಳು ಕೂಡ ಸೇರಿರುವುದು ವಿಶೇಷ.

ಈ ವಿಶೇಷ ವೈದ್ಯರ ತಂಡವು ೮೭ ವರ್ಷ ವಯಸ್ಸಿನ ಹಿರಿಯರಿಗೆ ಈ ಎಸ್‌ಆರ್‌ಟಿ ಚಿಕಿತ್ಸೆ ನಡೆಸಿದೆ. ಚಿಕಿತ್ಸೆ ನಡೆದು ಮೂರು ವರ್ಷಗಳ ಬಳಿಕವೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅವರು ಆರೋಗ್ಯಪೂರ್ಣ ಜೀವನ ನಡೆಸುತ್ತಿರುವುದು ಇನ್ನೊಂದು ಹೆಗ್ಗಳಿಕೆಯಾಗಿದೆ.

ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ತಜ್ಞರ ತಂಡ ಎಸ್‌ಆರ್‌ಟಿ ಚಿಕಿತ್ಸೆ ವಿಶೇಷ ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸುವಲ್ಲಿ ಯಶಸ್ಸಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಇಷ್ಟಪಡದ ರೋಗಿಗಳ ಪಾಲಿಗೆ ಇದು ವರದಾನವಾಗಿದೆ. ಆಸ್ಪತ್ರೆಯ ಬಹು-ಅಧ್ಯಯನ ವಿಭಾಗದ ತಜ್ಞರು ನಡೆಸಿದ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ. ಪರಿಪೂರ್ಣ ಫಲಿತಾಂಶ ಲಭ್ಯವಾಗಿರುವುದು ಕೂಡ ರೋಗಿಗಳ ನೆಮ್ಮದಿಗೆ ಕಾರಣವಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ. ದೂ.ಸಂ: 0824-4249999/2244999 ಹೆಲ್ಫ್‌ಲೈನ್: ಮೊ.ಸಂ: 8050636777ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News