ತಣ್ಣೀರು ಬಾವಿಯಲ್ಲಿ ಗಾಳಿ ಪಟ ಉತ್ಸವ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು, ಜ.16: ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡವು ಒಎನ್‌ಜಿಸಿ ಎಂಆರ್‌ಪಿಎಲ್ ಪ್ರಾಯೋಜಕತ್ವ ದಲ್ಲಿ ಕರಾವಳಿ ಉತ್ಸವದ ಭಾಗವಾಗಿ ಜಿಲ್ಲಾಡಳಿತದ ಸಹಕಾರದೊಂದಿಗೆ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಜ.18 ಮತ್ತು 19ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ದೇಶದ ವಿವಿಧ ರಾಜ್ಯಗಳಲ್ಲದೆ, ಇಂಗ್ಲೆಂಡ್, ಜರ್ಮನಿ, ನೆದರ್‌ಲ್ಯಾಂಡ್, ಸ್ಲೋವೆನಿಯಾ, ಇಟಲಿ, ಇಸ್ಟೋನಿಯ, ಸ್ವೀಡನ್ , ಇಂಡೋನೇಶಿಯ, ಪೋರ್ಚು ಗಲ್ ಮೊದಲಾದ ವಿದೇಶಿ ಗಾಳಿಪಟ ತಂಡಗಳು ಈ ಉತ್ಸವದಲ್ಲಿ ವಿವಿಧ ಗಾತ್ರ, ಸೂತ್ರ, ವಿನ್ಯಾಸದ ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸಲಿವೆ ಎಂದರು.
ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ ಎಂಬ ಧ್ಯೇಯ ವಾಕ್ಯದಲ್ಲಿ ಈ ಗಾಳಿ ಪಟ ಉತ್ಸವ ಜರಗಲಿದೆ. ಶನಿವಾರ ಮತ್ತು ರವಿವಾರ ಸಂಜೆ 3ರಿಂದ ರಾತ್ರಿ 9 ಗಂಟೆವರೆಗೆ ಗಾಳಿ ಪಟ ಉತ್ಸವ ನಡೆಯಲಿದೆ ಎಂದು ಟೀಮ್ ಮಂಗಳೂರು ತಂಡದ ಸರ್ವೇಶ್ ರಾವ್ ತಿಳಿಸಿದರು.