ಮಂಗಳೂರು ಸೇರಿ 6 ಕಡೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಪ್ರಾದೇಶಿಕ ಕೇಂದ್ರ ಸ್ಥಾಪನೆ: ರಮೇಶ್
ಮಂಗಳೂರು: ರಾಜ್ಯದಲ್ಲಿ ಮಂಗಳೂರು ಸೇರಿ 6 ಕಡೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕುಲಪತಿ ಎಚ್ ಕೆ.ರಮೇಶ್ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದ್ದಾರೆ.
ಅವರು ಗುರುವಾರ ನಗರದ ಗೋಲ್ಡ್ ಪಿಂಚ್ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ಪ್ರಾದೇಶಿಕ ಕೇಂದ್ರಗಳ ಪೈಕಿ ಮಂಗಳೂರು ಕೇಂದ್ರಕ್ಕೆ ಪ್ರಥಮವಾಗಿ ಫೆ.17 ರಂದು ಮುಖ್ಯ ಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸುಮಾರು 49 ಕೋಟಿ ರೂ ವೆಚ್ಚದಲ್ಲಿ ಎರಡು ವರ್ಷ ಗಳಲ್ಲಿ ನಿರ್ಮಾಣವಾಗಲಿದೆ. ಈ ಕೇಂದ್ರದ ಮೂಲಕ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳಿಗೆ ಅನುಕೂಲವಾಗಲಿದೆ. ಕೌಶಲ್ಯ ಹಾಗೂ ಸ್ಟಿಮ್ಯೂಲೇಶನ್ ಮತ್ತು ಸಂಶೋಧನಾ ಚಟುವಟಿಕೆ ಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದವರು ತಿಳಿಸಿದ್ದಾರೆ.
ರಾಜೀವ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯ ದೇಶದ ಅತೀ ದೊಡ್ಡ ಆರೋಗ್ಯ ವಿಶ್ವವಿದ್ಯಾಲಯವಾಗಿದೆ.ರಾಮನಗರದಲ್ಲಿ ಸುಮಾರು 600ಕೋಟಿ ರೂ ವೆಚ್ಚದಲ್ಲಿ ನೂತನ ಕಾಲೇಜು ಸಂಕೀರ್ಣ ಆರಂಭ ವಾಗಲಿದೆ. ಮುಂದೆ ಇ-ಆಫೀಸ್ ಮೂಲಕ ಕಚೇರಿ ನಿರ್ವಹಣೆ ಮಾಡಿ ಕಾಗದ ರಹಿತ ವ್ಯವಹಾರ ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜೀವ್ ಗಾಂಧಿ ವಿ.ವಿ ಯ ಕುಲಸಚಿವ (ಮೌಲ್ಯ ಮಾಪನ), ರಿಯಾಝ್ , ಸೆನೆಟ್ ಸದಸ್ಯರಾದ ಯು.ಟಿ ಇಫ್ತಿಕರ್ ಅಲಿ, ಡಾ.ಶಿವಶರಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.