"ಕ್ಲಾಸ್ ಆನ್ ವ್ಹೀಲ್ಸ್" ನ ಲೈಫ್ ಟೈಮ್ ಪ್ರಾಯೋಜಕತ್ವ ವಹಿಸಿಕೊಂಡ ಝಕರಿಯಾ ಹಾಜಿ ಜೋಕಟ್ಟೆ

Update: 2025-01-16 10:53 GMT

ಮಂಗಳೂರು: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ನಿಯಮಿತ ಸರಕಾರೀ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಂಚಾರಿ ಬಸ್ ಮೂಲಕ ನೀಡುತ್ತಿರುವ ಉಚಿತ ಪ್ರಾಥಮಿಕ ಕಂಪ್ಯೂಟರ್ ಶಿಕ್ಷಣ "ಕ್ಲಾಸ್ ಆನ್ ವ್ಹೀಲ್ಸ್" ನ ಮಾಸಿಕ ವೆಚ್ಚವನ್ನು ಎಂ.ಫ್ರೆಂಡ್ಸ್ ಚೆಯರ್ ಮ್ಯಾನ್ ಜೋಕಟ್ಟೆ ಝಕರಿಯಾ ಹಾಜಿಯವರು ವಹಿಸಿಕೊಂಡಿದ್ದಾರೆ.

ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಹಕಾರದೊಂದಿಗೆ ಯಶಸ್ಚಿಯಾಗಿ ನಡೆದು ಬರುತ್ತಿರುವ ಈ ಸೇವೆಗೆ ಮಾಸಿಕ ಒಂದು ಲಕ್ಷ ರೂ. ಖರ್ಚು ತಗಲುತ್ತದೆ. ಇದನ್ನು ಇದುವರೆಗೂ ಎಂ. ಫ್ರೆಂಡ್ಸ್ ದಾನಿಗಳ ಸಹಕಾರದೊಂದಿಗೆ ಭರಿಸುತ್ತಾ ಬರುತ್ತಿತ್ತು. ಹಲವಾರು ಚಾರಿಟಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಇದು ಎಂ.ಫ್ರೆಂಡ್ಸ್ ಗೆ ದೊಡ್ಡ ಹೊರೆಯಾಗಿತ್ತು. ಇದೀಗ ತನ್ನ ತಂದೆ ಬಜ್ಪೆಗುತ್ತು ಮರ್ಹೂಂ ಹಾಜಿ ಬಿ. ಶೇಕುಂಞಿ ಬ್ಯಾರಿ ಸ್ಮರಣಾರ್ಥ ಜೀವನ ಪರ್ಯಂತ ಈ ಕೊಡುಗೆ ನೀಡುವುದಾಗಿ ಇತ್ತೀಚೆಗೆ ದ.ಕ. ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಘೋಷಿಸಿದ ಝಕರಿಯಾ ಹಾಜಿಯವರು ಇದೇ ಜನವರಿಯಿಂದ ಮಾಸಿಕ ರೂಪಾಯಿ ಒಂದು ಲಕ್ಷ ವೆಚ್ಚವನ್ನು ನಿಗದಿತ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಕಂಪೂಟರ್ ಶಿಕ್ಷಣಕ್ಕಾಗಿ ನೀಡಲಿದ್ದಾರೆ.

"ಕ್ಲಾಸ್ ಆನ್ ವ್ಹೀಲ್ಸ್" ಎಂಬುವುದು ಸಂಪೂರ್ಣ ಡಿಜಿಟಲೈಸ್ಡ್ ಹಾಗೂ ಹವಾನಿಯಂತ್ರಿತ ಬಸ್ಸು. ಒಳಗಡೆ 16 ಲ್ಯಾಪ್ ಟಾಪ್ ಹಾಗೂ 32 ಆಸನ ಹಾಗೂ ಡೆಸ್ಕ್ ಗಳಿವೆ. ಬಯೋಮೆಟ್ರಿಕ್ ಡಿವೈಸ್, ಸಿ.ಸಿ. ಕ್ಯಾಮರಾ. ಇಬ್ಬರು ನುರಿತ ಕಂಪ್ಯೂಟರ್ ಅಧ್ಯಾಪಕರು ಮತ್ತು ಓರ್ವ ತಂತ್ರಜ್ಞ ಮತ್ತೋರ್ವ ಚಾಲಕ. ಹೀಗೇ ಒಟ್ಟು 4 ಸಿಬ್ಬಂದಿಗಳು ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬಡ ಕುಟುಂಬದಲ್ಲಿ ಜನಿಸಿದ ಝಕರಿಯಾ ಹಾಜಿಯವರು ಮಂಗಳೂರಲ್ಲಿ ಬರೀ ನಾಲ್ಕು ರೂಪಾಯಿಗೆ ದಿನಗೂಲಿ ಕೆಲಸವನ್ನು ಕೂಡಾ ಮಾಡುತ್ತಿದ್ದರು. ನಂತರ ಸೌದಿಗೆ ಉದ್ಯೋಗಾರ್ಥ ತೆರಳಿದ ಅವರು ಅಲ್ಲೂ ಕೂಡಾ ಕೆಲವು ಕಾಲ ಕಠಿಣ ದುಡಿಮೆ ನಡೆಸಿದ್ದರು. ಸಿಮೆಂಟ್ ಚೀಲವನ್ನು ಬೆನ್ನಿಗೇರಿಸಿ 25ನೇ ಮಹಡಿಗೆ ಸಾಗಿಸುವ ಕೂಲಿ ಕೆಲಸವನ್ನೂ ಮಾಡಿದ್ದರು. ಕ್ರಮೇಣ "ಅಲ್ ಮುಝೈನ್" ಸಂಸ್ಥೆಯನ್ನು ಸ್ಥಾಪಿಸಿ ತನ್ನ ಇಚ್ಛಾಶಕ್ತಿ, ಛಲ, ಸತತ ಪರಿಶ್ರಮದಿಂದ ಮುನ್ನೇರುತ್ತಾ ಬಂದ ಝಕರಿಯ್ಯಾ ಹಾಜಿಯವರು ಇಂದು ಎಂಟು ಸಾವಿರ ಮಂದಿ ದುಡಿಯುತ್ತಿರುವ ಬೃಹತ್ ಕಂಪೆನಿಯ ಒಡೆಯ.

ಆರ್ಥಿಕ, ಔದ್ಯಮಿಕ, ಜನಾದರಣೆಗಳ ವಿಷಯದಲ್ಲಿ ಎಂತಹವರೂ ಬೆರಗಾಗುವಂತಹ ಮೇರು ಮಟ್ಟ ತಲುಪಿದ್ದರೂ ತಾನು ನಡೆದು ಬಂದ ಹಾದಿಯನ್ನು ಮರೆಯದೆ ಇರುವುದು ಹಾಜಿಯವರ ಹೃದಯ ಶ್ರೀಮಂತಿಕೆಯಾಗಿದೆ. ಅವರ ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆಯ ತೂಕ ಸ್ವಲ್ಪ ಹೆಚ್ಚೇ ಎಂದರೂ ತಪ್ಪಲ್ಲ. ಬಾಲ್ಯದಲ್ಲಿ ಬಡತನದ ದೆಸೆಯಿಂದಾಗಿ ಶಿಕ್ಷಣ ವಂಚಿತರಾಗಿದ್ದ ಇವರು ಅದರ ಕಹಿ ಅನುಭವವನ್ನು ನೆನಪಲ್ಲಿಟ್ಟಿದ್ದಾರೆ. ಹಾಗಾಗಿ ಯಾರೂ ಶಿಕ್ಷಣ ವಂಚಿತರಾಗಬಾರದು ಎಂಬುದು ಅವರ ಕಳಕಳಿ. ತಲೆಮೇಲೆ ಅಚ್ಚು ಬೆಲ್ಲ ಮತ್ತು ತಕ್ಕಡಿ ಹೊತ್ತುಕೊಂಡು ಮನೆಮನೆಗೆ ಮಾರಾಟ ಮಾಡಿದ್ದ ಬಾಲ್ಯಕಾಲದ ಅನುಭವವನ್ನು ಹೇಳಿಕೊಳ್ಳಲು ಅವರು ಸಂಕೋಚ ಪಡುವುದಿಲ್ಲ. ಅವರ ಮಧುರ ವ್ಯಕ್ತಿತ್ವವೇ ಕಷ್ಟದಲ್ಲಿರುವವರಿಗೆ ಸವಿಜೇನ ಸಿಂಚನ.

ಎಂಟು ಸಾವಿರ ಮಂದಿಗೆ ಉದ್ಯೋಗ ಕೊಟ್ಟು ಎಂಟು ಸಾವಿರ ಕುಟುಂಬಗಳಿಗೆ ಅನ್ನದಾತರಾಗಿದ್ದರೂ ಆ ಬಗ್ಗೆ ಯಾವುದೇ ತಲೆಭಾರವಿಲ್ಲದಿರುವುದು ಇವರ ಶಿರೋಧಾರ್ಯ ಗುಣ. ಹಣ ಯಾರಲ್ಲೂ ಇರುತ್ತದೆ, ತಮ್ಮ ಯಶೋಗಾಥೆಯ ಕಥೆ ಹೇಳುವ ಹಲವರಿರಬಹುದು. ಆದರೆ ಯಶೋದುಂಧುಬಿಯ ಜೊತೆಗೆ ವಿನಯ ಸಂಪನ್ನತೆ ಹೊಂದಿರುವವರು, ಕಷ್ಟಗಳಿಗೆ ಸ್ಪಂದಿಸುವವರು ಅಪರೂಪ. ಅಂತಹ ಅಪರೂಪದ ಅಧ್ಭುತ ವ್ಯಕ್ತಿಯಾಗಿದ್ದಾರೆ ಝಕರಿಯಾ ಹಾಜಿಯವರು.

ಹಣ ಯಾರಿಗೂ ಕೈಗೂಡುತ್ತದೆ. ಆದರೆ ಗುಣ ಎಲ್ಲರಿಗೂ ಕೈಗೂಡುವುದಿಲ್ಲ. ಹಣವೂ ಗುಣವೂ ಜೊತೆಯಾಗಿರುವುದು ಒಂದು ವಿಶೇಷ ದೈವಾನುಗ್ರಹವಾಗಿದೆ. ಅಂತಹ ಒಂದು ವಿಶೇಷ ದೈವಾನುಗ್ರಹ ದೊರೆತ ಓರ್ವ ಅನುಗ್ರಹೀತ ಮಹನೀಯರಾಗಿದ್ದಾರೆ ಕರ್ನಾಟಕದ ರತ್ನ, ಜಿಲ್ಲೆಯ ಝಕರಿಯಾ ಹಾಜಿಯವರು. 

-ರಶೀದ್ ವಿಟ್ಲ.

Delete Edit

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News