ಕೊಣಾಜೆ: ಕೈರಂಗಳ ಶಾರದಾ ಗಣಪತಿ ಶಾಲೆಯಲ್ಲಿ ವಿಶ್ವ ಅವಳಿ ದಿನಾಚರಣೆ
ಕೊಣಾಜೆ: ಕೈರಂಗಳ ಗ್ರಾಮದ ಪುಣ್ಯಕೋಟಿಯ ಅವಳಿ ಹೆಸರಿನ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 17 ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಸೋಮವಾರ ವಿಶ್ವ ಅವಳಿ ಜವಳಿ ದಿನಾಚರಣೆಯ ಸಂದರ್ಭದಲ್ಲಿ ಶಾಲೆಯ ವತಿಯಿಂದ ಅವಳಿ ಜವಳಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಿಗೆ ಹೂವು ನೀಡಿ ಗೌರವಿಸಿ ಮಾತನಾಡಿದ ಶಾಲೆಯ ಸಂಚಾಲಕ ರಾಜಾರಾಂ ಭಟ್ ಅವರು, ಪರಶುರಾಮನ ಸೃಷ್ಟಿಯ ಈ ನೆಲದಲ್ಲಿ ತುಳುನಾಡಿನ ಕೋಟಿ ಚೆನ್ನಯರಂತಹ ಅವಳಿ ವೀರರ ಸಾಧನೆ ಮಾದರಿಯಾಗಿದೆ. ನಮ್ಮ ಶಾಲೆಯಲ್ಲೂ ಇದೀಗ ಅವಳಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಈ ವರ್ಷ 17 ಜೋಡಿ ಅವಳಿ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ನಾಲ್ಕು ಅವಳಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಇಲ್ಲಿ ಕಲಿತ ಅವಳಿ ವಿದ್ಯಾರ್ಥಿಗಳಲ್ಲಿ ಯಾವುದಾದರೂ ಒಂದು ಜೋಡಿಯಾದರೂ ಸೇನೆಯಲ್ಲಿ ದುಡಿದು ದೇಶ ಸೇವೆ ಮಾಡಬೇಕೆಂಬುದು ನನ್ನ ಕನಸು ಎಂದರು.
ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲ ಶ್ರೀಹರಿ, ಅವಳಿ ವಿದ್ಯಾರ್ಥಿಗಳಾದ ಸಂಜಯ್ ಭಂಡಾರಿ, ಸಂಜನಾ ಭಂಡಾರಿ ಉಪಸ್ಥಿತರಿದ್ದರು. ಶಿಕ್ಷಕರಾದ ಚಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಈ ಶಾಲೆಯಲ್ಲಿ 2021 ರಲ್ಲಿ ಒಟ್ಟು ಹನ್ನೊಂದು ಜೋಡಿಗಳಿದ್ದುದು ವಿಶೇಷವಾಗಿತ್ತು. ಇದೀಗ ಈ ವರ್ಷ ಒಟ್ಟು 17 ಜೋಡಿಗಳು ಅವಳಿ ವಿದ್ಯಾರ್ಥಿಗಳು ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
"ಇಲ್ಲಿರುವ 17 ಜೋಡಿ ಅವಳಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ನೋಡಲು ಒಂದೇ ರೀತಿ ಇದ್ದಾರೆ ಹಾಗೂ ಕಲಿಕೆಯಲ್ಲಿ, ಕ್ರೀಡಾಕೂಟಗಳಲ್ಲಿ ಅವಳಿ ಜವಳಿಯ ಸಾಧನೆ ಸಾದಾರಣ ಒಂದೇ ಮಟ್ಟದಲ್ಲಿರುತ್ತದೆ ಮತ್ತು ಅವರ ಆಸಕ್ತಿಯೂ ಸಮಾನವಾಗಿರುತ್ತದೆ".
-ಶ್ರೀಹರಿ ಪ್ರಾಂಶುಪಾಲ