ಭೋಜೇ ಗೌಡರು ಶಿಕ್ಷಕರಿಗೆ ನೀಡಿರುವ ಕೊಡುಗೆಯನ್ನು ಪಟ್ಟಿ ಮಾಡಿ ತೋರಿಸಲಿ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸವಾಲು
ಮಂಗಳೂರು, ನ.27: ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಎಸ್.ಎಲ್. ಭೋಜೇ ಗೌಡರು ಈ ತನಕ ಶಿಕ್ಷಕರಿಗೇನು ನೀಡಿದ್ದಾರೆಂದು ವೈಟ್ ಪೇಪರ್‌ನಲ್ಲಿ ಲೀಸ್ಟ್ ಮಾಡಿ ತೋರಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯ ಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಆಪ್ತರಾಗಿರುವ ಭೋಜೇ ಗೌಡರಿಗೆ ಅವರದ್ದೆ ಪಕ್ಷದ ಮುಖ್ಯ ಮಂತ್ರಿ ಇದ್ದಾಗ ಶಿಕ್ಷಕರ ಪರ ಕೆಲಸ ಮಾಡಲು ಸಾಕಷ್ಟು ಅವಕಾಶ ಇತ್ತು. ಆದರೆ ಅವರು ಶಿಕ್ಷಕರ ಯಾವುದೇ ಸಮಸ್ಯೆ ಬಗೆಹರಿಸುವ ಕಡೆಗೆ ಗಮನ ಹರಿಸಲಿಲ್ಲ ಎಂದು ಹೇಳಿದರು.
ಭೋಜೆಗೌಡ 2ನೇ ಬಾರಿ ಚುನಾವಣೆಯಲ್ಲಿ ನಿಲ್ಲುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಜನತೆ ನೀಡಿರುವ ಅಧಿಕಾರ ಇನ್ನೂ 4 ವರ್ಷ ಇರುವುದದಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ಮಾತ್ರ ಶಿಕ್ಷಕರ ಬೇಡಿಕೆ ಈಡೇರಲಿದೆ. ಬೇರೆ ಪಕ್ಷ ದ ಅಭ್ಯರ್ಥಿ ಗೆಲ್ಲುವುದರಿಂದ ಶಿಕ್ಷಕರಿಗೇನು ಪ್ರಯೋಜನ ಇಲ್ಲ ಎಂದರು.
ಎನ್‌ಪಿಎಸ್ ರದ್ದು ಮಾಡಿ ಹಳೆ ಸಿಸ್ಟಮ್ ಜಾರಿಗೆ ತರುವ ಬಗ್ಗೆ ಪ್ರಣಾಳಿಕೆಯಲ್ಲಿ ಹಾಕಿದ್ದೇವೆ. ಅಲ್ಲದೆ ನಾಲ್ಕು ರಾಜ್ಯಗಳಲ್ಲಿ ಮಾಡಿ ತೋರಿಸಿದ್ದೇವೆ. ನೌಕರರ ವಿರೋಧಿ ಕೆಲಸವನ್ನು ಹಿಂದಿನ ಬಿಜೆಪಿ ಸರಕಾರ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳು ಆಗಿದೆ. ಕೊಟ್ಟಂತಹ ಭರವಸೆಗಳನ್ನು ಪೂರ್ತಿಗೊಳಿಸಿದೆ. 2024ರ ಜೂನ್‌ನಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಕ್ಷೇತ್ರಕ್ಕೆ ಕೆ.ಕೆ. ಮಂಜುನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರು ಓರ್ವ ಶಿಕ್ಷಕರಾಗಿ ಶಿಕ್ಷಕರ ಸಮಸ್ಯೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.ಹಿಂದೆ ಅವರು ಎರಡು ಬಾರಿ ಚುನಾವಣೆಯಲ್ಲಿ ನಿಂತು ಕಡಿಮೆ ಅಂತರದಲ್ಲಿ ಸೋತಿದ್ದರು. ಈಗ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ನಲ್ಲಿ ಒಬ್ಬ ಪ್ರತಿನಿಧಿಯೂ ಇಲ್ಲ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್‌ನವರು ಚುನಾವಣೆ ಬರುತ್ತಿದ್ದಂತೆ ಶೈಕ್ಷಣಿಕ ಸಮ್ಮೇಳನ ಮಾಡುತ್ತಾರೆ. ಮತದಾರರಿಗೆ ಆಮಿಷ , ಪಾರ್ಟಿ, ಹಣ ಹಂಚಿ ಗೆದ್ದಿದ್ದಾರೆ ಎಂದು ದೂರಿದರು.
ಕೈಸರಕಾರದಿಂದ ಶಿಕ್ಷಕರಿಗೆ ಭರವಸೆ: ಮಂಜುನಾಥ್
ಶಿಕ್ಷಕರ ನೈರುತ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಕೆ. ಮಂಜುನಾಥ್ ಅವರು ಮಾತನಾಡಿ, ಶಿಕ್ಷಕರ ಸಮಸ್ಯೆ ಬಹಳಷ್ಟಿದೆ. 17 ವರ್ಷ ಸರಕಾರಿ ಪ್ರೌಢ ಶಾಲಾ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಎರಡು ಸಲ ನಿಂತಿದ್ದೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ 170 ಮತಗಳ ಸೋಲು ಆಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಡಿವಿ ಸದಾನಂದ ಗೌಡ ಮತ್ತು ಕಳೆದ ಬಾರಿ ಸಿಎಂ ಆಗಿದ್ದ ಎಚ್‌ಡಿಕೆ ಮತದಾರರಿಗೆ ಸುಳ್ಳು ಭರವಸೆ ನೀಡಿದ್ದರಿಂದ ಸೋಲಾಯಿತು. ಈ ಬಾರಿ ಕೈ ಸರಕಾರ ಇದೆ. ಜನರಿಗೆ ಭರವಸೆ ಬಂದಿದೆ. ಗೆಲುವು ಖಚಿತ ಎಂದರು.
‘ಓಲ್ಡ್ ಪೆನ್ಶನ್ ಸ್ಕೀಮ್’ ಕಾಂಗ್ರೆಸ್ ಮಾಡಿದ್ದು. ಇದನ್ನು 2006ರಲ್ಲಿ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಎಚ್‌ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರದ್ದು ಮಾಡಲಾಗಿತ್ತು. ಆಗ ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದರು. ‘ಹೊಸ ಪೆನ್ಶನ್ ಸ್ಕೀಮ್’ ಎಂದು ಶಿಕ್ಷಕರನ್ನು ನಂಬಿಸಿ ಬಿಜೆಪಿ ಮತ್ತು ಜೆಡಿಎಸ್ ಮೋಸ ಮಾಡಿದೆ. ಹೊಸ ಪೆನ್ಶನ್ ಸ್ಕೀಮ್ ಎಲ್ಲೂ ಇಲ್ಲ.ಅದು ‘ನ್ಯಾಶನಲ್ ಪೆನ್ಶನ್ ಸ್ಕೀಮ್’ ಆಗಿದೆ. ಇದೊಂದು ವಂಚನೆ ಸ್ಕೀಮ್ ಆಗಿದೆ ಎಂದು ಹೇಳಿದರು.
ಮಾಜಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಪಕ್ಷದ ಧುರೀಣರಾದ ಶಾಹುಲ್ ಹಮೀದ್ ಕೆ.ಕೆ. ಆಯಿಷಾ ಫರ್ಝಾನಾ, ನೀರಜ್‌ಚಂದ್ರಪಾಲ್, ವಿಶ್ವಾಸ್ ದಾಸ್, ಉಲ್ಲಾಸ್ ಕೋಟ್ಯಾನ್, ಲುಕ್ಮಾನ್ ಬಂಟ್ವಾಳ, ಸುಹಾನ್ ಆಳ್ವ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.