ಪಂಚರಾಜ್ಯಗಳಲ್ಲೂ ಕಾಂಗ್ರೆಸ್‌ಗೆ ಬಹುಮತ: ರಾಜ್ಯಸಭಾ ಸದಸ್ಯ ಡಾ. ನಾಸೀರ್ ಹುಸೇನ್

Update: 2023-10-18 11:51 GMT

ಮಂಗಳೂರು: ಐದು ರಾಜ್ಯಗಳಾದ ಮಿಝೋರಾಂ, ಛತ್ತೀಸ್ ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನ ಸಭೆಗಳಿಗೆ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ರಾಜ್ಯ ಸಭಾ ಸದಸ್ಯರು-ವಿಪಕ್ಷ ಸಚೇತಕರು, ಎಐಸಿಸಿ ಕಾರ್ಯಕಾರಿಣಿ ಸದಸ್ಯ ಡಾ. ನಾಸೀರ್ ಹುಸೇನ್ ತಿಳಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಡಬ್ಲ್ಯುಸಿ ಸದಸ್ಯರಾದ ಮೊದಲ ಬಾರಿ ದ.ಕ.ಜಿಲ್ಲೆಗೆ ಆಗಮಿಸಿದ್ದೇನೆ. ತಾನು ನೇಮಕಗೊಂಡ ಬಳಿಕ ಹೈದರಾಬಾದ್ ಮತ್ತು ದಿಲ್ಲಿಯಲ್ಲಿ ನಡೆದ ಎರಡು ಸಿಡಬ್ಲ್ಯುಸಿ ಸಭೆಗಳಲ್ಲಿ ಭಾಗವಹಿಸಿರುವೆನು. ಸಭೆಯಲ್ಲಿ ದೇಶದ ರಾಜಕೀಯ ಸ್ಥಿತಿಗತಿ, ಪಂಚ ರಾಜ್ಯಗಳ ವಿಧಾನ ಚುನಾವಣೆ, ಲೋಕಸಭಾ ಚುನಾವಣೆ ಎದುರಿಸಲು ಇರುವ ಸವಾಲು, ರಣತಂತ್ರ ಬಗ್ಗೆ ಚರ್ಚೆ ನಡೆದಿದೆ ಎಂದರು.

ಇಡೀ ದೇಶದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ, ಪಂಚರಾಜ್ಯಗಳ ಚುನಾವಣೆಯಲ್ಲಿ ಏನಾಗುತ್ತದೆ ಎಂಬ ಚರ್ಚೆ, ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆ ಫಲಿತಾಂಶ ಬರುತ್ತಿದೆ. ಕಾಂಗ್ರೆಸ್ ಪಕ್ಷ ಲೋಕಸಭೆಯ ಒಳಗೆ ಮತ್ತು ಹೊರಗಡೆ ದೇಶದ ಮುಂದಿರುವ ನಾನಾ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸಿದ್ದೇವೆ. ನಮ್ಮ ಸರ್ವೆ ಪ್ರಕಾರ ಕಾಂಗ್ರೆಸ್ ಐದು ರಾಜ್ಯಗಳಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವುದರ ಮೂಲಕ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.

ಭಾರತ ಜೋಡೊ ಯಾತ್ರೆ ಮೂಲಕ ದೇಶದ ಜನರನ್ನು ಒಂದುಗೂಡಿಸುವ ಪ್ರಯತ್ನ ನಡೆದಿದೆ. ಬಿಜೆಪಿ ಸುಳ್ಳು ಹೇಳಿ ಜನರನ್ನು ವಿಭಜಿಸಿ ತಪ್ಪುದಾರಿಗೆ ಇಳಿಸುವ ಪ್ರಯತ್ನ ನಡೆಸಿದರೂ ಅದು ಮುಂದಿನ ಚುನಾವಣೆಯಲ್ಲಿ ಫಲ ನೀಡುವುದಿಲ್ಲ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿಂದಿನ ಆಡಳಿತಾರೂಢ ಬಿಜೆಪಿ ಸರಕಾರದ ವೈಫಲ್ಯ, ಜನವಿರೋಧಿ ನಡೆಯ ಬಗ್ಗೆ ಜನರ ಮುಂದಿಟ್ಟು ಯಶಸ್ಸು ಗಳಿಸಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಪ್ರಯತ್ನ ಫಲ ನೀಡಿದ್ದರೂ, ಕರಾವಳಿ ಭಾಗದಲ್ಲಿ ರಾಜಕೀಯ ಧ್ರುವೀಕರಣದಿಂದಾಗಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು ಎಂದು ಹೇಳಿದರು.

ದ.ಕ., ಉಡುಪಿಯಲ್ಲಿ ಕಾಂಗ್ರೆಸ್‌ಗೆ ಎರಡು ಸ್ಥಾನಗಳು ಸಿಕ್ಕಿತ್ತು, ಆದರೂ ಅಭಿವೃದ್ಧಿ ಮತ್ತು ಸಾಮರಸ್ಯದ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನವನ್ನು ಮುಂದುವರಿಸಲಿದೆ. ಆದರೆ ಗಲಭೆಯನ್ನು ನಮ್ಮ ಸರಕಾರ ಯಾವತ್ತೂ ಸಹಿಸುವುದಿಲ್ಲ. ಇದರಲ್ಲಿ ರಾಜಿ ಇಲ್ಲ. ಪ್ರಚೋದನಕಾರಿ ಭಾಷಣ ಮಾಡುವ ಮತ್ತು ಸಮಾಜದ ಆರೋಗ್ಯವನ್ನು ಹಾಳು ಮಾಡುವ ವ್ಯಕ್ತಿಗಳ ವಿರುದ್ಧ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ನುಡಿದರು.

ರಾಜಕೀಯ ಧ್ರುವೀಕರಣ, ಅನೈತಿಕ ಪೊಲೀಸ್‌ಗಿರಿ, ಗಲಭೆ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯನ್ನುಂಟು ಮಾಡುವುದು, ಪ್ರಚೋದಕಕಾರಿ ಭಾಷಣವನ್ನು ತಡೆಯಲು ಸಾಧ್ಯವಾಗದಿದ್ದರೆ ಮುಂದೆ ಇಲ್ಲಿಯ ಅಭಿವೃದ್ಧಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಚುನಾವಣೆಯ ಯಶಸ್ಸಿಗೆ ದುಡಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಹಿಂದಿನ ಚುನಾವಣೆಯಲ್ಲಿ ಟಿಕೆಟ್ ವಂಚಿತ ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ನುಡಿದರು.

ಬಿಜೆಪಿ ವಿರುದ್ಧ ಕಾಂಗ್ರೆಸ್ 40 ಪರ್ಸೆಂಟ್ ಆರೋಪ ಮಾಡಿಲ್ಲ. ಈಗ ಐಟಿ ದಾಳಿ ನಡೆದಿರುವ ಗುತ್ತಿಗೆದಾರನಿಗೂ ಸಂಬಂಧವಿಲ್ಲ. ಆತ ಕಾಂಗ್ರೆಸ್ ಪಕ್ಷದವನಲ್ಲ ಎಂದು ಹೇಳಿದರು.

ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್‌ನಲ್ಲಿ ಪ್ರಾತಿನಿಧ್ಯ ಸಿಕ್ಕಿದಂತೆ ಯಾವುದೇ ಪಕ್ಷದಲ್ಲೂ ಸಿಕ್ಕಿಲ್ಲ. ಈಗಿನ ರಾಜ್ಯ ಸಂಪುಟದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ನಾಲ್ವರಿಗೆ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.

ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಪಕ್ಷದ ಧುರೀಣರಾದ ಜಿ.ಎ. ಬಾವ, ಯು.ಕೆ.ಮೋನು, ಇಬ್ರಾಹೀಂ ಕೋಡಿಜಾಲ್, ಶಾಹುಲ್ ಹಮೀದ್, ಬಿ.ಎಚ್.ಖಾದರ್, ಮಮತಾ ಗಟ್ಟಿ, ಕೃಪಾ ಆಲ್ವ, ಪದ್ಮರಾಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News