ಬಾಲಕಿಯ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ಮಂಗಳೂರು, ಜ.29: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರವೆಸಗಿದ್ದ ಆರೋಪ ಎದುರಿಸುತ್ತಿದ್ದ ಮುಹಮ್ಮದ್ ಸಾದಿಕ್ (24) ಎಂಬಾತನ ವಿರುದ್ಧದ ಆರೋಪವು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.
ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರ ಕೋಟೆ ಮನೆ ಮೂಲದ, ಬಂಟ್ವಾಳ ಬಿ ಮೂಡ ಗ್ರಾಮದ ಗೂಡಿನ ಬಳಿಯಲ್ಲಿ ವಾಸವಾಗಿದ್ದ ಮುಹಮ್ಮದ್ ಸಾದಿಕ್ ಎಂಬಾತನು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮೊಬೈಲ್‌ನಲ್ಲಿ ಪರಿಚಯ ಮಾಡಿಕೊಂಡು ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದ. ಅಲ್ಲದೆ ಬಾಲಕಿಯ ತಾಯಿ ಅನಾರೋಗ್ಯದಲ್ಲಿದ್ದಾಗ ಮನೆಗೆ ಹೋಗಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕವೂ ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ಅತ್ಯಾಚಾರ ನಡೆಸಿದ್ದ. ಇದರಿಂದ ಬಾಲಕಿ ಗರ್ಭವತಿಯಾಗಿದ್ದಳು. ಈ ಬಗ್ಗೆ ಬಾಲಕಿಯ ತಾಯಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಂದಿನ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಕೆ.ವಿ. ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಮಧ್ಯೆ ಬಾಲಕಿಯು ಮಗುವಿಗೆ ಜನ್ಮ ನೀಡಿದ್ದಳು.
ಈ ಬಗ್ಗೆ ನ್ಯಾಯಾಲಯದಲ್ಲಿ 20 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಆರೋಪಿಯು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದರೂ ಮಗುವಿನ ಡಿಎನ್‌ಎ ಪರೀಕ್ಷಾ ವರದಿಯಲ್ಲಿ ಸಾದಿಕ್ ಮಗುವಿನ ಜೈವಿಕ ತಂದೆ ಎಂಬ ವರದಿ ಬಂದಿತ್ತು. ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯ ಮತ್ತು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಆರೋಪಿಯ ವಿರುದ್ಧ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಾನು ಕೆ. ಎಸ್. ಅವರು ಕಲಂ: 376(3), 376(2) (ಎನ್) ಮತ್ತು ಕಲಂ: 6 ಪೊಕ್ಸೊ ಕಾಯ್ದೆಯಂತೆ 20 ವರ್ಷಗಳ ಕಾಲ ಕಠಿಣ ಶಿಕ್ಷೆಯಲ್ಲದೆ 50,000 ರೂ.ದಂಡ ವಿಧಿಸಿದ್ದಾರೆ.
ದಂಡದ ಮೊತ್ತವನ್ನು ನೊಂದ ಬಾಲಕಿಗೆ ಪಾವತಿಸುವಂತೆ ಆದೇಶಿಸಿದ್ದಾರೆ. ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ಥರ ಪರಿಹಾರ ಯೋಜನೆಯಡಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 6,50,000 ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ನಿರ್ದೇಶನ ನೀಡಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದಾರೆ.