ಮಂಗಳೂರು: 24 ಪೌರಕಾರ್ಮಿಕರಿಗೆ ಸ್ಯಾನಿಟರಿ ಸುಪರ್‌ವೈಸರ್ ಹುದ್ದೆಗೆ ಮುಂಭಡ್ತಿ

Update: 2023-09-14 13:29 GMT

ಮಂಗಳೂರು, ಸೆ.14: ಸುಧೀರ್ಘ ವರ್ಷಗಳ ಸೇವೆಯ ಹೊರತಾಗಿಯೂ ಮುಂಭಡ್ತಿ ಪಡೆಯದೆ ವಯೋನಿವೃತ್ತಿ ಅಂಚಿನಲ್ಲಿ ರುವ 24 ಮಂದಿ ಪೌರ ಕಾರ್ಮಿಕರಿಗೆ ಪಾಲಿಕೆ ಆಯುಕ್ತರಾದ ಆನಂದ್ ಅವರು, ಗ್ರೂಪ್ ಸಿ ವೃಂದದ ಸ್ಯಾನಿಟರಿ ಸುಪರ್‌ ವೈಸರ್ ಹುದ್ದೆಗೆ ಏಕಕಾಲದಲ್ಲಿ ಮುಂಭಡ್ತಿ ಆದೇಶ ಹೊರಡಿಸಿದ್ದಾರೆ.

ಅದರಂತೆ ಪೌರಕಾರ್ಮಿಕರ ಸೇವೆಗೆ ಸಾರ್ಥಕ ಮನೋಭಾವ ಮೂಡಿಸಲು ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕೆಲಸದ ಮೇಲೆ ಪ್ರೇರಣೆ ಮೂಡಿಸುವ ಉದ್ದೇಶದಿಂದ, ಗುರುವಾರ ಮುಂಭಡ್ತಿ ಪಡೆದ ಪೌರ ಕಾರ್ಮಿಕರನ್ನು ಆಯುಕ್ತರ ಕಚೇರಿಗೆ ಆಹ್ವಾನಿಸಿ ಆದೇಶವನ್ನು ವಿತರಿಸಿ ಶುಭ ಹಾರೈಸಿದರು.

ಮಂಗಳೂರು ಮಹಾನಗರಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಮಹಾನಗರಪಾಲಿಕೆಗಳ ವೃಂದ ಮತ್ತು ನೇಮಕಾತಿ ನಿಯಮದಂತೆ ಪ್ರತೀ 5 ವರ್ಷಗಳ ಅವಧಿಯಲ್ಲಿ ಖಾಲಿ ಹುದ್ದೆಗಳ ಲಭ್ಯತೆಗೆ ಅನುಗುಣವಾಗಿ ಮುಂಭಡ್ತಿ ನೀಡಲು ಅವಕಾಶವಿದೆ. ಆದರೆ ಸುಮಾರು 35 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ ಹೊರತಾಗಿಯೂ ತಮ್ಮ ಸೇವಾವಧಿಯಲ್ಲಿ ಯಾವುದೇ ರೀತಿಯ ಮುಂಭಡ್ತಿ ಪಡೆಯದೆ ವಯೋನಿವೃತ್ತಿ ಹೊಂದುತ್ತಿರುವುದನ್ನು ಗಮನಿಸಿ ಆಯುಕ್ತರು ಈ ಆದೇಶ ನೀಡಿದ್ದಾರೆ.

ಮಹಾನಗರಪಾಲಿಕೆಗಳ ವೃಂದ ಮತ್ತು ನೇಮಕಾತಿ ನಿಯಮ 2011 ರಂತೆ ಮುಂಭಡ್ತಿ ವೃಂದವಾದ ಸ್ಯಾನಿಟರಿ ಸುಪರ್‌ ವೈಸರ್ ಹುದ್ದೆಯು ಖಾಲಿಯಿರುವುದನ್ನು ಪರಿಗಣಿಸಿ ಅರ್ಹ 24 ಪೌರಕಾರ್ಮಿಕರಿಗೆ ಗ್ರೂಪ್ ಸಿ ವೃಂದದ ಸ್ಯಾನಿಟರಿ ಸುಪರ್‌ ವೈಸರ್ ಹುದ್ದೆಗೆ ಮುಂಭಡ್ತಿ ದೊರಕಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News