ಮಂಗಳೂರು: ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸ ತಜ್ಞಗೆ ಎಬಿವಿಪಿ ಅವಮಾನ; ಎನ್‌ಎಸ್‌ಯುಐನಿಂದ ಕ್ಷಮಾಪಣೆ

Update: 2023-09-13 12:53 GMT

ಮಂಗಳೂರು, ಸೆ. 13: ಸ್ವಾತಂತ್ರ್ಯ ಹೋರಾಟಗಾರ ಬಿ.ವಿ. ಕಕ್ಕಿಲಾಯ ಪ್ರೇರಿತ ಉಪನ್ಯಾಸದ ಕಾರ್ಯಕ್ರಮಕ್ಕಾಗಿ ಕಳೆದ ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ ಆಗಮಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸ ತಜ್ಞ, ನಿವೃತ್ತ ಪ್ರಾಧ್ಯಾಪಕ ಡಾ. ಶಂಸುಲ್ ಇಸ್ಲಾಂ ಅವರ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಎಬಿವಿಪಿ ವಿದ್ಯಾರ್ಥಿಗಳು ಅವಮಾನ ಎಸಗಿದ್ದಾರೆಂದು ಆರೋಪಿಸಿ ಎನ್‌ಎಸ್‌ಯುಐನಿಂದ ಖಂಡನಾ ಸಭೆ ಹಾಗೂ 1857ರ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರಿಗೆ ಗೌರವಾರ್ಪಣೆ ಬುಧವಾರ ನಡೆಯಿತು.

ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಗೇಟಿನ ಎದುರು ಕರ್ನಾಟಕದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿ ನಾಲ್ಕು ಘಟನೆಗಳು ಹಾಗೂ ಆ ಘಟನೆಗಳಲ್ಲಿ ಪ್ರಾಣತ್ಯಾಗಗೈದ 132 ಹುತಾತ್ಮರ ಹೆಸರುಗಳ ಫಲಕಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರು ಈ ಸಂದರ್ಭ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯ ತನ್ನದೇ ಆದ ಕೊಡುಗೆಯ ಮೂಲಕ ಹೆಸರುವಾಸಿಯಾಗಿದೆ. ಆದರೆ ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರ ಬಿ.ವಿ. ಕಕ್ಕಿಲ್ಲಾಯ ಪೇರಿತ ಉಪನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ್ದ ದಿಲ್ಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ, ಇತಿಹಾಸ ತಜ್ಞ ಡಾ. ಶಂಸುಲ್ ಇಸ್ಲಾಂ ವಿರುದ್ಧ ಎಬಿವಿಪಿ ಪ್ರತಿಭಟಿಸಿತ್ತು. 1857ರ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರ ಬಗ್ಗೆ ಸಂಶೋಧನೆ ಮಾಡಿ ಮಾಹಿತಿ ಸಂಗ್ರಹಿಸಿರುವ, ಆ ವೀರರ ಅರಿವು ಮೂಡಿಸಲು ಬಂದಿದ್ದ ಡಾ. ಶಂಸುಲ್ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿರುವ ಎಬಿವಿಪಿ ನಡೆಯನ್ನು ಎನ್‌ಎಸ್‌ಯಐ ಖಂಡಿಸುವುದಾಗಿ ಹೇಳಿದರು.

ಜನಸಾಮಾನ್ಯರಿಗೆ ಅರಿವೇ ಇಲ್ಲದ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಲು ಬಂದಿದ್ದ ಅವರಿಗೆ ಅಡ್ಡಿ ಪಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ಹುತಾತ್ಮರಿಗೆ ಎಬಿವಿಪಿಯವರು ಅಗೌರವ ತೋರಿಸಿದ್ದರು. ಇತಿಹಾಸ ತಜ್ಞರೊಬ್ಬರನ್ನು ಅವಮಾನ ಮಾಡಿದ್ದರು. ಒಳ್ಳೆಯ ಉದ್ದೇಶದಿಂದ ಮಂಗಳೂರಿಗೆ ಆಗಮಿಸಿದ್ದ ಇತಿಹಾಸ ತಜ್ಞರೊಬ್ಬರು ಇಲ್ಲಿನ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊತ್ತೊಯ್ಯುವ ಪರಿಸ್ಥಿತಿ ಬಂದಿದ್ದು, ಅಂತಹ ಕೃತ್ಯಕ್ಕೆ ವಿದ್ಯಾರ್ಥಿಗಳ ಪರವಾಗಿ ಎನ್‌ಎಸ್‌ಯುಐ ಕ್ಷಮೆಯಾಚಿಸುವುದಾಗಿ ಅವರು ಹೇಳಿದರು.

ಮಂಗಳೂರು ವಿವಿಯ ಬೋಧಕರು ಹಾಗೂ ಬೋಧಕೇತರರಿಗೆ ನೀಡಬೇಕಾದ ವೇತನ ವಿಳಂಬ ಸೇರಿದಂತೆ ವಿವಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆಯೂ ಎನ್‌ಎಸ್‌ಐಯು ಈಗಾಗಲೇ ಧ್ವನಿ ಎತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದ ಗಣೇಶೋತ್ಸವ ವಿಚಾರದಲ್ಲಿಯೂ ಸ್ಥಳೀಯ ಶಾಸಕರು ವಿನಾ ಕಾರಣ ಮಧ್ಯಪ್ರವೇಶಿಸಿ ಅಡ್ಡಿ ಪಡಿಸಿದ್ದಾರೆ. ಜನಪ್ರತಿನಿಧಿಯೊಬ್ಬರ ಈ ತೆರನಾದ ವರ್ತನೆಯನ್ನು ಎನ್‌ಎಸ್‌ಯುಐ ಖಂಡಿಸುವುದಾಗಿ ಸುಹಾನ್ ಆಳ್ವ ಹೇಳಿದರು.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿ ನಾಲ್ಕು ಘಟನೆಗಳು ಹಾಗೂ ಆ ಘಟನೆಗಳಲ್ಲಿ ಪ್ರಾಣತ್ಯಾಗಗೈದ 132 ಹುತಾತ್ಮರ ಹೆಸರುಗಳ ಫಲಕವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ಡಾ. ಶಂಸುಲ್ ಇಸ್ಲಾಂ ಅವರು ಅನಾವರಣಗೊಳಿಸಿದ್ದರು.

ಕಾಲೇಜಿನ ಆವರಣದಲ್ಲಿ ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಹುತಾತ್ಮರಿಗೆ ಗೌರವ ಸಲ್ಲಿಸಲು ನಿರ್ಧರಿಸಲಾಗಿತ್ತಾದರೂ, ಪೊಲೀಸರು ಅನುಮತಿ ನಿರಾಕರಿಸಿದ ಕಾರಣ ಕಾಲೇಜಿನ ಗೇಟಿನ ಮುಂಭಾಗದಲ್ಲಿ ವಿದ್ಯಾರ್ಥಿಗಳು ಹುತಾತ್ಮರ ಫಲಕಕ್ಕೆ ಗೌರವ ಸಲ್ಲಿಸಿದರು.

ವಿದ್ಯಾರ್ಥಿ ಮುಖಂಡರಾದ ಸಿರಾಜ್ ಮಂಗಳೂರು, ಸಮರ್ಥ್ ಭಟ್, ಶಾನ್ ಸಿರಿ, ಸುಖ್ವಿಂದರ್‌ಸಿಂಗ್, ಶಲ್ವಿನ್, ಅಝೀಮ್, ಸ್ಟೀವನ್, ರಿಹಾನ್, ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕರಾದ ಅನಸ್, ಜಮ್ಶಿದ್, ಮರ್ಝೂಕ್, ಮರ್ಷದ್ ಹಾಗೂ ಇತರರು ಉಪಸ್ಥಿತರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News