ಮಂಗಳೂರು: ಅಂಬೇಡ್ಕರ್ ವೃತ್ತ ನಿರ್ಮಾಣ ಕಾಮಗಾರಿಗೆ ಚಾಲನೆ

Update: 2024-09-15 14:02 GMT

ಮಂಗಳೂರು: ನಗರದ ಬಲ್ಮಠ-ಜ್ಯೋತಿ ಸಮೀಪ ಮನಪಾ ವತಿಯಿಂದ ನಿರ್ಮಿಸಲು ಉದ್ದೇಶಿಸಲಾಗಿರುವ ಅಂಬೇಡ್ಕರ್ ವೃತ್ತ ನಿರ್ಮಾಣ ಕಾಮಗಾರಿಗೆ ರವಿವಾರ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನ (ಡಿ.6)ಕ್ಕಿಂತ ಮೊದಲು ಅಂಬೇಡ್ಕರ್ ಹೆಸರಿನ ನೂತನ ವೃತ್ತವನ್ನು ಲೋಕಾರ್ಪಣೆ ಮಾಡಲಾಗುವುದು. ಬೇರೆ ಬೇರೆ ಕಂಪನಿ ಅಥವಾ ಬ್ಯಾಂಕ್‌ ಗಳ ಸಿಎಸ್‌ಆರ್ ನಿಧಿ ಬಳಸಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಪ್ರತಿಮೆ ಸಹಿತ ಸುಂದರವಾದ ವೃತ್ತದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅನುದಾನ ಕ್ರೋಢೀಕರಣಕ್ಕೆ ಸಮಸ್ಯೆಯಾದರೆ, ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಜವಾಬ್ದಾರಿ ತನ್ನದು ಎಂದು ಹೇಳಿದರು.

ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ ಇಲ್ಲಿದ್ದ ಅಂಬೇಡ್ಕರ್ ವೃತ್ತವನ್ನು ರಸ್ತೆ ಅಭಿವೃದ್ಧಿ ಸಂದರ್ಭ ತೆಗೆಯಲಾ ಗಿತ್ತು. ಮತ್ತೆ ವೃತ್ತ ನಿರ್ಮಾಣವಾಗಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿತ್ತು. ಭಾರತಕ್ಕೆ ಜಗತ್ತಿನಲ್ಲೇ ಶ್ರೇಷ್ಠ ವಾದ ಸಂವಿಧಾನವನ್ನು ಒದಗಿಸಿದ ಅಂಬೇಡ್ಕರ್ ಹೆಸರಿನಲ್ಲಿ ಸುಸಜ್ಜಿತವಾದ ವೃತ್ತವನ್ನು ನಿರ್ಮಿಸಲಾಗುತ್ತದೆ. ಅಂಬೇಡ್ಕರ್ ವೃತ್ತಕ್ಕೆ ಸಂಬಂಧಿಸಿ ಸಂಘಟನೆಗಳಲ್ಲಿದ್ದ ಭಿನ್ನಾಭಿಪ್ರಾಯಗಳು ಕೂಡ ದೂರವಾಗಿದೆ. ಕಾಮಗಾರಿ ಸಂಬಂಧಿಸಿ ಎಲ್ಲರೂ ಏಕಾಭಿಪ್ರಾಯ ಹೊಂದಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಪಾಲಿಕೆಯ ಉಪ ಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಮಾಜಿ ಸದಸ್ಯ ಹರೀಶ್ ಕುಮಾರ್ ಕೆ., ಪಾಲಿಕೆಯ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಸದಸ್ಯರಾದ ಎ.ಸಿ.ವಿನಯರಾಜ್, ನವೀನ್ ಡಿಸೋಜ, ಶಶಿಧರ ಹೆಗ್ಡೆ, ಮುಖಂಡರಾದ ಎಸ್.ಅಪ್ಪಿ, ದೇವದಾಸ್, ಲೋಲಾಕ್ಷ, ಅಶೋಕ ಕೊಂಚಾಡಿ ಉಪಸ್ಥಿತರಿದ್ದರು.

ಅಂಬೇಡ್ಕರ್ ವೃತ್ತ ಎಂಬ ನಾಮಕರಣದ ಅಧಿಕೃತ ದಾಖಲೆಯ ಕಡತ ಮಂಗಳೂರು ಮಹಾನಗರ ಪಾಲಿಕೆಯಲ್ಲಿಲ್ಲ. ಆದ್ದರಿಂದ ಅಂಬೇಡ್ಕರ್ ವೃತ್ತ ಎಂದು ನಾಮಕರಣಗೊಳಿಸಲು ರಾಜ್ಯ ಸರಕಾರದ ಅಧಿಸೂಚನೆ ಆಗಬೇಕು. ಮುಂದಿನ ಪಾಲಿಕೆ ಕೌನ್ಸಿಲ್‌ನಲ್ಲಿ ಕರಡು ಅನುಮೋದನೆ ಪಡೆದು ಅಂತಿಮ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಡತ ಕಳುಹಿಸಲಾಗುವುದು. ಬಳಿಕ ಆ ಕಡತ ಕ್ಯಾಬಿನೆಟ್‌ನಲ್ಲಿ ಅನುಮೋದನೆ ಪಡೆಯಬೇಕು. ನಂತರ ಸ್ಮಾರ್ಟ್ ಸಿಟಿ ಯೋಜನೆ ಯಡಿ ಉದ್ದೇಶಿತ ರೀತಿಯಲ್ಲೇ ಅಂಬೇಡ್ಕರ್ ವೃತ್ತ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ತಿಳಿಸಿದ್ದಾರೆ.

*1994ರಲ್ಲಿ ಪಾಲಿಕೆಯಲ್ಲಿ ಕೌನ್ಸಿಲ್ ಆಡಳಿತ ಇಲ್ಲದ ವೇಳೆ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿದ್ದ ಅಂದಿನ ಜಿಲ್ಲಾಧಿ ಕಾರಿ ಭರತ್ ಲಾಲ್ ಮೀನಾ ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆಗಳಲ್ಲಿ ದಲಿತ ಸಂಘಟನೆಗಳ ಆಗ್ರಹದ ಮೇರೆಗೆ ಜ್ಯೋತಿ ಟಾಕೀಸ್ ಸಮೀಪದ ಜಂಕ್ಷನ್ ಭಾಗವನ್ನು ಅಂಬೇಡ್ಕರ್ ವೃತ್ತ ಎಂದು ನಾಮಕರಣಗೊಳಿಸಿದ್ದರು. ಬಳಿಕ ಅಲ್ಲಿ ತಾತ್ಕಾಲಿಕ ವೃತ್ತ ನಿರ್ಮಿಸಲಾಗಿತ್ತು. ಕ್ರಮೇಣ ರಸ್ತೆ ಅಗಲೀಕರಣದ ವೇಳೆ ಅದನ್ನು ತೆಗೆಯಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಮೀಪದ ಬಲ್ಮಠ ಕಾಲೇಜಿನ ಗೋಡೆಯಲ್ಲಿ ಅಂಬೇಡ್ಕರ್ ವೃತ್ತ ಎಂದು ಬರೆಯಲಾಗಿತ್ತು. ಅಂಬೇಡ್ಕರ್ ವೃತ್ತ ಎಂದು ಕರೆಯಲಾಗುತ್ತಿದ್ದರೂ ವೃತ್ತ ರಚನೆ ಆಗದ ಬಗ್ಗೆ ದಲಿತ ಸಂಘಟನೆಗಳ ನಾಯಕರು ಜಿಲ್ಲಾ, ತಾಲೂಕು ಮಾತ್ರವಲ್ಲದೆ ಪಾಲಿಕೆಯ ಕುಂದು ಕೊರತೆ ಸಭೆಗಳಲ್ಲೂ ನಿರಂತರ ಧ್ವನಿ ಎತ್ತುತ್ತಾ ಬಂದಿದ್ದರು. ಇದೀಗ ಕೊನೆಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News