ಮಂಗಳೂರು: ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ವಾರ್ಷಿಕ ಮಹಾಸಭೆ

Update: 2023-07-28 13:47 GMT

ಮಂಗಳೂರು: ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ವಾರ್ಷಿಕ ಮಹಾಸಭೆಯು ಸಂಘದ 'ಸಾಹಿತ್ಯ ಸದನ'ದಲ್ಲಿ ಇತ್ತೀಚೆಗೆ ನಡೆಯಿತು.

ಸಂಘದ ಸಹಕಾರ್ಯದರ್ಶಿ ಆಕೃತಿ ಭಟ್ ರವರು ಕಾರ್ಯಕ್ರಮದ ಸಂಚಾಲಕಿಯಾಗಿ ಮಹಾಸಭೆಯನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷೆಯಾದ ಡಾ. ಜ್ಯೋತಿ ಚೇಳ್ಯಾರು ಅವರು ಸ್ವಾಗತಿಸಿದರು. ಕಾರ್ಯದರ್ಶಿ ಸುಜಾತಾ ಕೋಡ್ಮಾಣ್ ರವರು 2022-23ರ ಸಂಘದ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು.

ಹಿರಿಯ ಲೇಖಕಿ ಹಾಗೂ ಸಂಘದ ಮಾಜಿ ಅಧ್ಯಕ್ಷೆಯಾದ ಡಾ. ಸಬೀಹಾ ಭೀಮಗೌಡರವರು, ಸಂಘ ವರ್ಷದುದ್ದಕ್ಕೂ ವೈವಿಧ್ಯಮಯ ಕಾರ್ಯಕ್ರಮ ಗಳನ್ನು ನಡೆಸಿದ್ದು ಮೆಚ್ಚುಗೆಗೆ ಅರ್ಹವಾದ ಸಾಧನೆ, ಅಂದರು. ಸಂಘ ರಾಜ್ಯೋತ್ಸವ ಪ್ರಶಸ್ತಿಯನ್ನು ಗೆದ್ದಿರುವುದು ಹೆಮ್ಮೆಯ ವಿಚಾರ. ಜೊತೆಗೆ, ಸಮಾನ ನಾಗರಿಕ ಸಂಹಿತೆ ಹಾಗೂ ಮಧ್ಯ ಪ್ರದೇಶದ ಉಚ್ಚನ್ಯಾಯಾಲಯವು ಸಹಮತದ ಲೈಂಗಿಕ ಸಂಬಂಧಗಳ ವಿಚಾರದಲ್ಲಿ ಹೆಂಗಸರ ವಯೋಮಿತಿಯನ್ನು 18 ವರ್ಷಗಳಿಂದ 16 ವರ್ಷಗಳಿಗೆ ಇಳಿಸುವಂತೆ ಕೇಂದ್ರ ಸರಕಾರದ ಮುಂದಿಟ್ಟಿರುವ ಪ್ರಸ್ತಾವ - ಇವೆರಡನ್ನೂ ಸಂಘ ವಿರೋಧಿಸುತ್ತಿರುವುದು ದಿಟ್ಟವಾದ ಹೆಜ್ಜೆ ಎಂದು ಹೇಳಿದರು.

ಸಂಘದ ಖಜಾಂಚಿ ಶರ್ಮಿಳಾ ಶೆಟ್ಟಿಯವರು ವರ್ಷದ ಲೆಕ್ಕಪತ್ರವನ್ನು ಮಂಡಿಸಿದರು. ಸಂಘದ ಹೊಸ ಸದಸ್ಯರು ತಮ್ಮನ್ನು ಪರಿಚಯಿಸಿಕೊಂಡ ಅನಂತರ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಅವರು ಸಂಘದ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಉಪಾಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿಯವರು ವಂದಿಸಿದರು.

ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ಚುನಾವಣಾ ಪ್ರಕ್ರಿಯೆ ನಡೆಸಿದ ಹಿರಿಯ ಸದಸ್ಯೆ ಬಿ ಎಮ್ ರೋಹಿಣಿಯವರು ಪ್ರಸಕ್ತ ಸಾಲಿನ ಸಮಿತಿ ಸದಸ್ಯರನ್ನು ಮರು ಆಯ್ಕೆಗೊಳಿಸುವುದಾಗಿ ತಿಳಿಸಿದರು.

ಮಧ್ಯಾಹ್ನ ಕಥಾವಾಚನ, ಏಕಪಾತ್ರಾಭಿನಯ, ಕವನವಾಚನ, ಹಾಡುಗಾರಿಕೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭೆಯ ಅಂಗವಾಗಿ ನಡೆದವು.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News