ಮಂಗಳೂರು: ಜಾತಿ ನಿಂದನೆ, ಹಲ್ಲೆ ಪ್ರಕರಣ; ಮಹಿಳೆಗೆ ಜೈಲು ಶಿಕ್ಷೆ, ದಂಡ

Update: 2023-09-12 14:59 GMT

ಮಂಗಳೂರು, ಸೆ.12: ಪರಿಶಿಷ್ಟ ಜಾತಿಯ ಮಹಿಳೆಗೆ ಜಾತಿನಿಂದನೆ, ಹಲ್ಲೆ ಮಾಡಿದ ಮಹಿಳೆಯೊಬ್ಬರಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯ 6 ತಿಂಗಳ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

2019ರ ಜು.30ರಂದು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪ್ಪು ಕುಡ್ಪಾಡಿಯ ಪರಿಶಿಷ್ಟ ಜಾತಿಗೆ ಸೇರಿದ ಗೀತಾ ಎಸ್.ಪಿ ಅವರಿಗೆ ಪ್ರೇಮಾ ಅವಾಚ್ಯ ಶಬ್ಧದಿಂದ ಬೈದು ಜಾತಿ ನಿಂದನೆ ಮಾಡಿ, ಚಪ್ಪಲಿ, ಮರದ ರೀಪು ಹಾಗೂ ಕೊಡೆಯಿಂದ ತೀವ್ರ ಸ್ವರೂಪದ ಹಲ್ಲೆ ಮಾಡಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸಿಪಿ ಟಿ.ಕೋದಂಡರಾಮ್ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿ ವಿರುದ್ಧ ಒಟ್ಟು 12 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿತ್ತು. ನ್ಯಾಯಾಧೀಶೆ ಪ್ರೀತಿ ಕೆ.ಪಿ. ಅವರು ಆರೋಪಿತೆಗೆ ಭಾರತೀಯ ದಂಡ ಸಂಹಿತೆ ಕಲಂ 325ರಂತೆ 6 ತಿಂಗಳ ಸಾದಾ ಸಜೆ ಮತ್ತು 20,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ 2 ತಿಂಗಳ ಹೆಚ್ಚುವರಿ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯ ಕಲಂ 3(2) (ವಿ)(ವಿಎ) ಅಡಿ 6 ತಿಂಗಳ ಸಾದಾ ಸಜೆ ಮತ್ತು 20,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 2 ತಿಂಗಳ ಸಾದಾ ಸಜೆ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ ಪಾವತಿಸಿದ ದಂಡದಲ್ಲಿ 38,000 ರೂ.ಗಳನ್ನು ಗೀತಾ ಅವರಿಗೆ ಪಾವತಿಸಲು ಆದೇಶದಲ್ಲಿ ತಿಳಿಸಿದ್ದಾರೆ. ಅಭಿಯೋಜನೆಯ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News