ಮಂಗಳೂರು: ತಾಯಿಯನ್ನು ರಕ್ಷಿಸಿದ ವಿದ್ಯಾರ್ಥಿನಿಗೆ ಜಿಲ್ಲಾಧಿಕಾರಿ ಸನ್ಮಾನ
ಮಂಗಳೂರು: ಕಿನ್ನಿಗೋಳಿಯಲ್ಲಿ ರಸ್ತೆದಾಟುತ್ತಿದ್ದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ತಾಯಿಯನ್ನು ರಕ್ಷಿಸಿದ ವಿದ್ಯಾರ್ಥಿನಿ ವೈಭವಿಯನ್ನು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಿದರು.
ತನ್ನ ತಾಯಿ ರಿಕ್ಷಾದಡಿಗೆ ಬಿದ್ದುದನ್ನು ಕಂಡ ವೈಭವಿ ತಕ್ಷಣ ರಿಕ್ಷಾ ಮೇಲಕ್ಕೆತ್ತುವ ಮೂಲಕ ತಾಯಿಯನ್ನು ರಕ್ಷಿಸಿದ್ದಳು. ಇದರ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಮುಖ್ಯಮಂತ್ರಿಯೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.
7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ವೈಭವಿಯನ್ನು ಜಿಲ್ಲಾಧಿಕಾರಿ ತನ್ನ ಕಚೇರಿಗೆ ಕರೆಯಿಸಿ ಪೇಟ, ಹಾರ ತೊಡಿಸಿ ಸನ್ಮಾನಿಸಿದರಲ್ಲದೆ ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಮತ್ತು ವೈಭವಿಯ ಪಾಲಕರು ಉಪಸ್ಥಿತರಿದ್ದರು.