ಮಂಗಳೂರು: ಬಾಲಕಿ ಜೊತೆ ಅಸಭ್ಯ ವರ್ತನೆ; ಸರಕಾರಿ ಬಸ್ ಕಂಡೆಕ್ಟರ್‌ಗೆ ಜೈಲುಶಿಕ್ಷೆ, ದಂಡ

Update: 2024-02-23 15:07 GMT

ಮಂಗಳೂರು: ಅಪ್ರಾಪ್ತೆಯ ಜೊತೆ ಅಸಭ್ಯವಾಗಿ ವರ್ತಿಸಿದ ಸರಕಾರಿ ಬಸ್ ಕಂಡೆಕ್ಟರ್ ಬಾಗಲಕೋಟೆಯ ದಾವಲ್ ಸಾಬ್ (34) ಎಂಬಾತನಿಗೆ ಮಂಗಳೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಐಪಿಸಿ ಕಲಂ 509ರಡಿ ಆರೋಪಿಗೆ 1 ವರ್ಷ ಸಜೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಯಾಗಿ ಒಂದು ತಿಂಗಳು ಸಜೆ, ಪೊಕ್ಸೊ ಕಾಯ್ದೆಯ ಕಲಂ 12ರಡಿ 2 ವರ್ಷ ಕಠಿಣ ಸಜೆ ಮತ್ತು 10,000 ರೂ.ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ ಮತ್ತೆ 2 ತಿಂಗಳು ಸಜೆ ವಿಧಿಸಿದ್ದಾರೆ. ಅಲ್ಲದೆ ಸಂತ್ರಸ್ತೆಗೆ 10,000 ರೂ.ಗಳನ್ನು ಪರಿಹಾರವಾಗಿ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ.

2023ರ ಮಾರ್ಚ್‌ನಲ್ಲಿ ಬಾಲಕಿ ಶಾಲೆಯಿಂದ ಬಿ.ಸಿ.ರೋಡ್‌ನಲ್ಲಿರುವ ತನ್ನ ಮನೆಗೆ ಮರಳಲು ಕಲ್ಲಡ್ಕದಲ್ಲಿ ಸರಕಾರಿ ಬಸ್ ಹತ್ತಿದ್ದಳು. ಆವಾಗ ಬಸ್‌ನಲ್ಲಿ 4-5 ಮಂದಿ ಮಾತ್ರ ಪ್ರಯಾಣಿಕರಿದ್ದರು ಎನ್ನಲಾಗಿದೆ. ಮುಂದಿನ ನಿಲ್ದಾಣದಲ್ಲಿ ಅವರೆಲ್ಲಾ ಬಸ್‌ನಿಂದ ಇಳಿದಿದ್ದರು. ಈ ವೇಳೆ ಆರೋಪಿ ಕಂಡೆಕ್ಟರ್ ಹಾಗೂ ಬಾಲಕಿ ಮಾತ್ರ ಬಸ್ಸಿನಲ್ಲಿದ್ದರು. ಆಕೆಯ ಬಳಿ ಹೋದ ಕಂಡೆಕ್ಟರ್ ಅಸಭ್ಯವಾಗಿ ವರ್ತಿಸಿದ್ದ. ತಾನು ಹೆತ್ತವರು, ಪೊಲೀಸರಿಗೆ ತಿಳಿಸುವುದಾಗಿ ಬಾಲಕಿ ಹೇಳಿದರೂ ಕೂಡ ಆರೋಪಿ ಅಸಭ್ಯತನ ಮುಂದುವರಿಸಿದ್ದ. ಇದರಿಂದ ನೊಂದ ಬಾಲಕಿ ಬಸ್‌ನ ಸಂಖ್ಯೆ ಸಮೇತ ಮನೆಗೆ ತೆರಳಿ ತಾಯಿ ಬಳಿ ಘಟನೆಯ ಬಗ್ಗೆ ವಿವರಿಸಿದ್ದಳು. ನಂತರ ತಾಯಿ ಮತ್ತು ಬಾಲಕಿಯು ಬಂಟ್ವಾಳ ನಗರ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಕಂಡೆಕ್ಟರ್‌ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದರು.

ಇನ್‌ಸ್ಪೆಕ್ಟರ್ ನಂದಿನಿ ಎಸ್.ಶೆಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಎಫ್‌ಟಿಎಸ್‌ಸಿ-1 ಪೊಕ್ಸೊ)ದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಶುಕ್ರವಾರ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ಪೊಕ್ಸೊ ವಿಶೇಷ ಸರಕಾರಿ ಅಭಿಯೋಜಕಿ ಸಹಾನದೇವಿ ಬೋಳೂರು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News