ಮಂಗಳೂರು: ನ. 24ರಿಂದ 19ನೇ ನ್ಯಾಶನಲ್ ಮಾಸ್ಟರ್ಸ್‌ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್

Update: 2023-11-13 16:30 GMT

ಸಾಂದರ್ಭಿಕ ಚಿತ್ರ

ಮಂಗಳೂರು, ನ.13: ನಗರದ ಎಮ್ಮೆಕೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 24.94 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಂತರ್‌ರಾಷ್ಟ್ರೀಯ ಮಟ್ಟದ ನೂತನ ಈಜು ಕೊಳದಲ್ಲಿ 19ನೇ ನ್ಯಾಶನಲ್ ಮಾಸ್ಟರ್ಸ್‌ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ನವೆಂಬರ್ 24, 25 ಹಾಗೂ 26 ರಂದು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಹಾಗೂ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಈಜುಕೊಳದ ಉದ್ಘಾಟನೆಯು ನ.24ರಂದು ನಡೆಯಲಿದೆ . ಇದೇ ಸಂದರ್ಭದಲ್ಲಿ ಸ್ಥಳೀಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿರುವ ಕ್ರೀಡಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.

ಎಮ್ಮೆಕೆರೆಯಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಈಜುಕೊಳದ ನಿರ್ಮಾಣ ಈ ಭಾಗದ ಜನರ ಬಹುಕಾಲದ ಕನಸು ಆಗಿದೆ. 2014-15ರಲ್ಲಿ ಅಭಯಚಂದ್ರ ಜೈನ್ ಅವರು ಕ್ರೀಡಾ ಸಚಿವರಾಗಿದ್ದಾಗ 12 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸ ಲಾಗಿತ್ತು. 5 ಕೋಟಿ ರೂ. ಬಿಡುಗಡೆಯಾಗಿತ್ತು. ಆಗ ಸ್ಥಳೀಯ ಶಾಸಕರಾಗಿದ್ದ ಜೆ.ಆರ್.ಲೋಬೊ ಅವರು ಈಜುಕೊಳದ ನಿರ್ಮಾಣಕ್ಕೆ ಸಂಬಂಧಿಸಿ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ 24.94 ಕೋಟಿ ರೂ. ವೆಚ್ಚದಲ್ಲಿ ಈಜುಕೊಳದ ಕಾಮಗಾರಿ ಪೂರ್ಣಗೊಂಡಿದೆ. ಒಡಿಶಾ ಸಂಬಲ್‌ಪುರದ ಮೆ.ಉದ್ರಾ ಕನ್‌ಸ್ಟ್ರಾಕ್ಷನ್ ಪೈ.ಲಿ. ಸಂಸ್ಥೆಯು ಈಜುಕೊಳದ ನಿರ್ಮಾಣದ ಗುತ್ತಿಗೆಯನ್ನು ವಹಿಸಿಕೊಂಡು ಕಾಮಗಾರಿಯನ್ನು ನಿರ್ವಹಿಸಿದೆ ಎಂದು ವಿವರಿಸಿದರು.

ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಕರ್ನಾಟಕದ ಮೊದಲ ಹಾಗೂ ರಾಷ್ಟ್ರದ ಕೆಲವೇ ಸರ್ವ ಸುಸಜ್ಜಿತ ಈಜುಕೊಳಗಳ ಪೈಕಿ ಒಂದಾಗಿರುತ್ತದೆ. ಕರ್ನಾಟಕ ಹಾಗೂ ಮಂಗಳೂರಿನ ಜನತೆಗೆ ಇದು ಅಭಿಮಾನದ ವಿಷಯವಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈಜುಕೊಳವನ್ನು ಲೋಕಾರ್ಪಣೆಗೊಳಿಸಲಿರುವರು. ದ.ಕ ಜಿಲ್ಲಾ ಉಸ್ತುವಾರಿ ಸಚಿ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಯುವ ಜನ ಸೇವೆ ಹಾಗೂ ಕ್ರೀಡಾ ಸಚಿವ ನಾಗೇಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಲಿ ದ್ದಾರೆ ಎಂದರು.

800 ಮಂದಿ ಭಾಗವಹಿಸುವ ನಿರೀಕ್ಷೆ : ಈಗಾಗಲೇ 21 ರಾಜ್ಯಗಳ ಸುಮಾರು 700 ಕ್ಕಿಂತಲೂ ಅಧಿಕ ಸ್ಪರ್ಧಾಳುಗಳು ನೋಂದಾಯಿಸಿಕೊಂಡಿದ್ದಾರೆ.ನೊಂದಾವಣೆಗೆ ನವೆಂಬರ್ 15ರಂದು ಕೊಯ ದಿನವಾಗಿದ್ದು ಸುಮಾರು 800ಕ್ಕಿಂತಲೂ ಅಧಿಕ ಸ್ಪರ್ಧಾಳುಗಳು ಹಾಗೂ 150 ಈಜು ತೀರ್ಪುಗಾರರು ಮತ್ತು ಸ್ವಯಂ ಸೇವಕರು ಭಾಗವಹಿಸುವುದನ್ನು ನಿರೀಕ್ಷಿಸ ಲಾಗಿದೆ. ಈ ಕ್ರೀಡೋತ್ಸವವು ಎಮ್ಮೆಕೆರೆ ಈಜುಕೊಳದ ಧಾರಣ ಸಾರ್ಮಥ್ಯದ ಪರೀಕ್ಷೆಯಾಗಿರುತ್ತದೆ. ಏನಾದರೂ ಕೊರತೆ ಕಂಡು ಬಂದರೆ ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಲು ಇದೊಂದು ಅವಕಾಶವಾಗಿದೆ ಎಂದು ಮಾಹಿತಿ ನೀಡಿದರು.

ಕ್ರೀಡಾ ಸಮುಚ್ಚಯದಲ್ಲಿ ಯುವ ಜನರ ಹಾಗೂ ಹಿರಿಯ ನಾಗರೀಕರ ಮುಕ್ತ ಉಪಯೋಗಕ್ಕಾಗಿ ವಿವಿಧ ಕ್ರೀಡಾ ಸೌಕರ್ಯ, ಆವರಣದಲ್ಲಿ ಮುಕ್ತ ನಡಿಗೆಗಾಗಿ ವಾಕಿಂಗ್ ಟ್ರ್ಯಾಕ್ ಸೌಲಭ್ಯ ಇರುತ್ತದೆ.

ಫಿನಾ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಾಣ: ಇಂಟರ್‌ನ್ಯಾಶನಲ್ ಸ್ವಿಮ್ಮಿಂಗ್ ಫೆಡರೇಶನ್( ಫಿನಾ) ಸೂಚಿಸಿದ ನಿಖರವಾದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾದ ಈಜುಕೊಳ ಸಂಕೀರ್ಣವು 50 ಅಡಿ ಉದ್ದ ಮತ್ತು 25ಅಡಿ ಅಗಲ ಮತ್ತು 1.4ಮೀಟರ್ ನಿಂದ 2.2 ಮೀಟರ್ ವರೆಗಿನ ಆಳವನ್ನು ಹೊಂದಿದೆ. ಈಜು ಕೊಳದ ಪಕ್ಕದಲ್ಲಿ ಅಭ್ಯಾಸಕ್ಕೆ 25 ಮೀ ಉದ್ದ, 10 ಅಗಲ ಮತ್ತು 2.2 ಮೀ ಆಳದ ಈಜುಕೊಳವನ್ನು ನಿರ್ಮಿಸಲಾಗಿದೆ. ಮಕ್ಕಳನ್ನು ಸ್ಪರ್ಧಾತ್ಮಕ ಈಜು ಸ್ಪರ್ಧೆಗೆ ಅಣಿಗೊಳಿಸುವ ಉದ್ದೇಶಕ್ಕಾಗಿ 13.8ಮೀಟರ್ ಉದ್ದ ,10ಮೀ ಅಗಲ ಮತ್ತು 1.2ಮೀ ಆಳದ ಕಿಡ್ಸ್ ಪೂಲ್‌ನ್ನು ಸಹ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈಜುಕೊಳದ ನೆಲಮಹಡಿಯಲ್ಲಿ , ಕಾರು, ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ, ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ಪ್ರತ್ಯೇಕ ಕೊಠಡಿಗಳು, ಜಿಮ್ನಾಷಿಯಂ, ಚೇಜಿಂಗ್ ರೂಂ , ಶೌಚಾಲಯ, ಮತ್ತು ಲಾಕರ್‌ಗಳು, ಆಡಳಿತ ಕಚೇರಿ ಮತ್ತು ಸ್ಪೋರ್ಟ್ಸ್ ಮೆಡಿಸಿನ್ ಮತ್ತು ಫಿಸಿಯೊಥೆರಫಿ , ಡೋಪಿಂಗ್ ಪರೀಕ್ಷೆಯ ಕೊಠಡಿ ಮತ್ತು ಅಂತರ್‌ರಾಷ್ಟ್ರೀಯ ಈವೆಂಟ್‌ ಗಳನ್ನು ನಡೆಸಲು ಅಗತ್ಯದ ಸೌಲಭ್ಯಗಳು ಸ್ವಿಮ್ಮಿಂಗ್ ಕಾಂಪ್ಲೆಕ್ಸ್‌ನಲ್ಲಿರುತ್ತದೆ ಎಂದು ಖಾದರ್ ತಿಳಿಸಿದರು.

400 ಮಂದಿಗೆ ಆಸನ ಸಾಮರ್ಥ್ಯ: ಈಜುಕೊಳದ ಪಕ್ಕದಲ್ಲಿ 400 ಮಂದಿಗೆ ವೀಕ್ಷಣೆಗೆ ಆಸನ ವ್ಯವಸ್ಥೆ ಇರುತ್ತದೆ. ವೀಕ್ಷಕರ ಆಸನದ ಎದುರು ಭಾಗದಲ್ಲಿ ಈಜುಗಾರರು, ಅಧಿಕಾರಿಗಳು, ತರಬೇತುದಾರರಿಗೆ ವ್ಯವಸ್ಥೆ , ಈಜುಕೊಳ ಮತ್ತು ವೀಕ್ಷಕರ ಗ್ಯಾಲರಿಯನ್ನು ಪ್ರವೇಶಿಸಲು ಎರಡು ಪ್ರತ್ಯೇಕ ಎಲಿವೇಟರ್‌ಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಚಾಂಪಿಯನ್‌ಶಿಪ್‌ನ ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಕೆ.ತೇಜೋಮಯ, ಮಾಜಿ ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ ಸೋಜ, ಮಾಜಿ ಮೇಯರ್‌ಗಳಾದ ಶಶೀಧರ ಹೆಗ್ಡೆ ಮತ್ತು ಭಾಸ್ಕರ ಮೊಯ್ಲಿ, ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ , ಸ್ಮಾರ್ಟ್ ಸಿಟಿಯ ಮಹಾ ಪ್ರಬಂಧಕ ಅರುಣ್ ಪ್ರಭ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News