ಮಂಗಳೂರು: ಸೆ.15ರಂದು ಡಾ. ಅಂಬೇಡ್ಕರ್ ವೃತ್ತಕ್ಕೆ ಶಿಲಾನ್ಯಾಸ

Update: 2024-09-11 13:21 GMT

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದ ಅಂಬೇಡ್ಕರ್ ವೃತ್ತದ (ಜ್ಯೋತಿ-ಕೆ.ಎಂ.ಸಿ ಆಸ್ಪತ್ರೆ ಬಳಿ) ಮಧ್ಯಭಾಗದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರವರ ಪ್ರತಿಮೆಯೊಂದಿಗೆ ವೃತ್ತ ನಿರ್ಮಾಣಕ್ಕೆ ಸೆ. ಸೆಪ್ಟೆಂಬರ್ 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಶಿಲಾನ್ಯಾಸ ನೆರವೇರಿಸಲು ನಿರ್ಧರಿಸಲಾಗಿದೆ.

ಮೇಯರ್ ಸುಧೀರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದಿಂದ ನಿರ್ಧರಿಸಲಾಗಿದೆ.

ಸುಂದರವಾದ ವೃತ್ತ ಹಾಗೂ ಅದರ ನಡುವೆ ಅಂಬೇಡ್ಕರ್ ಪ್ರತಿಮೆ ಮತ್ತು ಈಗಾಗಲೇ ಈ ಹಿಂದೆ ನಿರ್ಧರಿಸಿರುವಂತೆ ರಸ್ತೆಯ ಪಕ್ಕದಲ್ಲಿ ಅಂಬೇಡ್ಕರ್ ಸ್ತೂಪವನ್ನು ನಿರ್ಮಿಸಲು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಅಂಬೇಡ್ಕರ್ ವೃತ್ತದಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಟ್ರಾಫಿಕ್ ಸಿಗ್ನಲ್, ಬ್ಯಾರಿಕೇಡ್ ಸಹಿತ ಫುಟ್ಪಾತ್, ಪಾದಚಾರಿ ಕೋರಿಕೆಯ ಸಿಗ್ನಲ್ ವ್ಯವಸ್ಥೆ, ವ್ಯವಸ್ಥಿತ ಝೀಬ್ರಾ ಕ್ರಾಸಿಂಗ್, ಇತ್ಯಾದಿಗಳನ್ನು ನಿರ್ಮಾಣ ಮಾಡುವ ಮೂಲಕ ಸೈಕಲ್ ಸವಾರರ, ಪಾದಚಾರಿಗಳ ಸಂಪೂರ್ಣ ಸುರಕ್ಷೆ ಮತ್ತು ವೇಗ ನಿಯಂತ್ರಣದೊಅದಿಗೆ ಎಲ್ಲಾ ವಾಹನಗಳ ಸುಗಮ ಸಂಚಾರಕ್ಕೆ ನಿರ್ಧಾರ ಕೈಗೊಳ್ಳಲಾಯಿತು.

ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟವು ಮೇಯರ್ ಸೂಚನೆಯಂತೆ ಮಹಾ ನಗರಪಾಲಿಕೆಗೆ ಸಲ್ಲಿಸಿರುವ ನುರಿತ ಇಂಜಿನಿಯರ್/ವಾಸ್ತು ಶಿಲ್ಪಿಗಳ ತಂಡದಿಂದ ಸಿದ್ದಪಡಿಸಲಾದ ಮಾದರಿ ನಕ್ಷೆ ಮತ್ತು ವಿನ್ಯಾಸವನ್ನು ಸಭೆಯು ಪರಿಶೀಲಿಸಿ, ಈ ವಿನ್ಯಾಸದಂತೆ ವೃತ್ತ ನಿರ್ಮಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ಸನ್ಮಾನ್ಯ ಉಪಮೇಯರ್ ಸುನೀತಾ, ಮ.ನ.ಪಾ ಆಯುಕ್ತರಾದ ಆನಂದ್ ಸಿ.ಎಲ್., ಸ್ಥಾಯಿ ಸಮಿತಿಯ ಅಧ್ಯಕ್ಷ ಭರತ್ ಕುಮಾರ್, ಸದಸ್ಯರಾದ ಮನೋಜ್ ಕುಮಾರ್, ಸಂಗೀತಾ ಆರ್. ನಾಯಕ್ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ ಮತ್ತು ಇತರ ಅಧಿಕಾರಿಗಳು ಹಾಗೂ ವಿವಿಧ ದಲಿತ ಮತ್ತು ನಾಗರಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News