ಮಂಗಳೂರು: 'ಸಮೋಸ ಅಜ್ಜ' ಮುದೆಯಪ್ಪ ಮಾಳಗಿ ನಿಧನ
ಮಂಗಳೂರು: ನಗರದ ಸಂತ ಅಲೋಶಿಯಸ್ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಳೆದ 44 ವರ್ಷಗಳಿಂದ ಸಮೋಸ ಮಾರಾಟ ಮಾಡುತ್ತಿದ್ದ ಸಮೋಸ ಅಜ್ಜ ಎಂದೇ ಚಿರಪರಿಚಿತರಾಗಿದ್ದ ಮುದೆಯಪ್ಪ ಮಾಳಗಿ (88) ಬುಧವಾರ ಮೃತಪಟ್ಟಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಮುದೆಯಪ್ಪ ಮಾಳಗಿ ನಗರದ ಕಾವೂರಿನಲ್ಲಿ ವಾಸವಾಗಿದ್ದರು. ದಿನನಿತ್ಯ ಮಧ್ಯಾಹ್ನದ ಊಟದ ವೇಳೆ ಸಮೋಸ ಮಾರಾಟ ಮಾಡುತ್ತಿದ್ದರಿಂದ ವಿದ್ಯಾರ್ಥಿಗಳು ಇವರನ್ನು ಸಮೋಸ ಅಜ್ಜ ಎಂದೇ ಕರೆಯುತ್ತಿದ್ದರು. ಗಾಂಧಿ ಟೋಪಿ, ಕನ್ನಡಕ ಮತ್ತು ಬಿಳಿ ಜುಬ್ಬಾ-ಧೋತಿ ಧರಿಸುತ್ತಿದ್ದ ಅವರು ಅಣ್ಣಾ ಹಜಾರೆಯನ್ನು ಹೋಲುವ ಕಾರಣದಿಂದ ವಿದ್ಯಾರ್ಥಿಗಳು ಇವರನ್ನು ಅಣ್ಣ ಅಜ್ಜ ಎಂದು ಕೂಡ ಕರೆಯುತ್ತಿದ್ದರು.
ಸಮೋಸದ ಜೊತೆ ಚಿಕ್ಕಿ, ಕಡಲೆಕಾಯಿ, ಬರ್ಫಿ ಮತ್ತು ಜಿಲೆಬಿಗಳನ್ನು ಕೂಡಾ ಮಾರಾಟ ಮಾಡುತ್ತಿದ್ದರು. 44 ವರ್ಷಗಳ ಹಿಂದೆ ಬಾದಾಮಿ ತಾಲೂಕಿನಿಂದ ಮಂಗಳೂರಿಗೆ ಬಂದಿದ್ದ ಇವರು ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಬಳಿ ಸಮೋಸ ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.