ನಿಧಾನಗತಿಯಲ್ಲಿ ಸಾಗಿರುವ ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ: ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ
ಮಂಗಳೂರು, ಆ.1: ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ರಸ್ತೆ ಕಾಮಗಾರಿಯನ್ನು ಮುಂದಿನ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಅವರು ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿರುವ ಇತರ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಶುರು ಮಾಡಿ 6 ವರ್ಷವಾಗಿದ್ದರೂ, ಇನ್ನೂ ಯಾಕೆ ರಸ್ತೆ ಕಾಮಗಾರಿ ಮುಗಿದಿಲ್ಲ ? ಇದಕ್ಕೆ ಮುಖ್ಯ ಕಾರಣವೇನು ಎಂದು ಪ್ರಶ್ನಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆಗೆ ಭೂಸ್ವಾಧೀನಪಡಿಸಿಕೊಳ್ಳಲು ಸಮಸ್ಯೆ ಇದೆ. ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಗೆ ಜಾಗವನ್ನು ವಶಪಡಿಸಿಕೊಡಬೇಕಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.
'ಬೇರೆ ಯಾವುದೇ ನಗರಗಳಲ್ಲೂ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಇಷ್ಟೊಂದು ನಿಧಾನಗತಿಯಲ್ಲಿ ಸಾಗಿಲ್ಲ' ಎಂದು ಸಚಿವರು ಅಸಮಧಾನ ವ್ಯಕ್ತಪಡಿಸಿದರು.
'ಕೇಂದ್ರ ಸರಕಾರದಿಂದ 392 ಕೋಟಿ ರೂ. ಮತ್ತು ರಾಜ್ಯ ಸರಕಾರದಿಂದ 414 ಕೋಟಿ ರೂ. ಸೇರಿದಂತೆ 806 ಕೋಟಿ ರೂ. ಬಿಡುಗಡೆಯಾಗಿದೆ' ಎಂದು ಇದೇ ವೇಳೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ದ.ಕ. ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್, ಸ್ಮಾರ್ಟ್ ಸಿಟಿ ಎಂಡಿ ಮತ್ತು ಜಿಪಂ ಮುಖ್ಯ ಕಾರ್ಯದರ್ಶಿ ಡಾ. ಆನಂದ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಪಾಲಿಕೆ ಆಯುಕ್ತ ಆನಂದ್ ಮತ್ತಿತರರು ಉಪಸ್ಥಿತರಿದ್ದರು.