ಮಂಗಳೂರು: ಮನೆ ಕಿಟಕಿಯ ಗ್ರಿಲ್ ಕತ್ತರಿಸಿ ಕಳವಿಗೆ ಯತ್ನ
ಇಂತಹ ಕೃತ್ಯಗಳ ಬಗ್ಗೆ ಸಾರ್ವಜನಿಕರು ಜಾಗ್ರತೆ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಪರಿಸರದಲ್ಲಿ ಅಥವಾ ಆಸುಪಾಸಿನಲ್ಲಿ ಕಂಡುಬಂದಲ್ಲಿ ಪೊಲೀಸ್ ಕಂಟ್ರೋಲ್ ನಂಬರ್ 9480802321 ಗೆ ಅಥವಾ 112ಗೆ ಮಾಹಿತಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಮಂಗಳೂರು, ಜು.7: ಕಳ್ಳರು ಮನೆಯೊಂದರ ಕಿಟಕಿಯ ಗ್ರಿಲ್ ಕತ್ತರಿಸಿ ಕಳವಿಗೆ ಯತ್ನಿಸಿದ ಘಟನೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ರಸ್ತೆಯಲ್ಲಿ ರವಿವಾರ ಮುಂಜಾವ ನಡೆದಿದೆ.
ಕೋಡಿಕಲ್ ರಸ್ತೆಯಲ್ಲಿನ ಮನೆಯೊಂದರಲ್ಲಿ ಮನೆ ಮಂದಿ ಮಲಗಿದ್ದ ವೇಳೆ ಈ ಕೃತ್ಯ ನಡೆದಿದ್ದು, ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳರ ಚಲನವಲನ ಸೆರೆಯಾಗಿದೆ. ಇಂದು ಮುಂಜಾವ 2 ಗಂಟೆ ಸುಮಾರಿಗೆ ಐವರ ತಂಡ ಮನೆಯೊಂದರನ್ನು ಆವರಣ ಪ್ರವೇಶಿಸುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಖ ಗವಚ ಧರಿಸಿರುವ ಕಳ್ಳರು ಬ್ಯಾಗ್, ಮತ್ತು ಲೈಟ್ ಅನ್ನು ಹೊಂದಿದ್ದಾರೆ. ಈ ತಂಡ ಮನೆಯ ಕೊಠಡಿಯ ಕಿಟಕಿಯ ಗ್ರಿಲ್ ಅನ್ನು ಕತ್ತರಿಸಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದೆ.
ಸಾರ್ವಜನಿಕರು ಜಾಗೃತೆ ವಹಿಸಲು ನಗರ ಪೊಲೀಸ್ ಆಯುಕ್ತರು ಸೂಚನೆ
ಇಂತಹ ಕೃತ್ಯಗಳ ಬಗ್ಗೆ ಸಾರ್ವಜನಿಕರು ಜಾಗ್ರತೆ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಪರಿಸರದಲ್ಲಿ ಅಥವಾ ಆಸುಪಾಸಿನಲ್ಲಿ ಕಂಡುಬಂದಲ್ಲಿ ಪೊಲೀಸ್ ಕಂಟ್ರೋಲ್ ನಂಬರ್ 9480802321 ಗೆ ಅಥವಾ 112ಗೆ ಮಾಹಿತಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
. ಮನೆಗಳಲ್ಲಿ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಹಾಗೂ ಪ್ರವೇಶ ದಾರಿ ಕಾಣುವ ಹಾಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಿ ಮತ್ತು ಅವುಗಳು ಸುಸ್ಥಿತಿಯಲ್ಲಿರುವ ಬಗ್ಗೆ, ರಾತ್ರಿಯ ದೃಶ್ಯಗಳು ಸ್ಪಷ್ಟವಾಗಿ ಕಾಣುವ ಹಾಗೆ ಮತ್ತು ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಿ ಎಂದವರು ಮನವಿ ಮಾಡಿದ್ದಾರೆ.