ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು ಇಡೀ ರಾಜ್ಯಕ್ಕೆ ಮಾದರಿ: ಸಚಿವ ಬಿ. ನಾಗೇಂದ್ರ
ಮಂಗಳೂರು: ತುಳುನಾಡು ಮಂಗಳೂರಿನಲ್ಲಿ ಕ್ರೀಡಾ ಸಾಧಕರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಬಹಳಷ್ಟು ಸಾಧನೆ ಮಾಡಿದ ಸಾಧಕರು ಇದ್ದಾರೆ. ನಮ್ಮ ಉತ್ತರ ಕರ್ನಾಟಕಕ್ಕಿಂತಲೂ ಮಂಗಳೂರು ಭಾಗದ ಜನರು ಬಹಳ ಬುದ್ಧಿವಂತರಾದ ಕಾರಣ ಮಂಗಳೂರನ್ನು ಬುದ್ದಿವಂತರ ನಾಡು ಅನ್ನುತ್ತಾರೆ ಎಂದು ಕ್ರೀಡಾ ಮತ್ತು ಯುವಜನ ಇಲಾಖೆ ಸಚಿವ ಬಿ. ನಾಗೇಂದ್ರ ಹೇಳಿದರು.
ಶನಿವಾರ ಮಂಗಳೂರು ನಗರದ ಮಂಗಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ಮಾಸ್ಟರ್ಸ್ ಆಥ್ಲೆಟಿಕ್ ಅಸೋಶೇಷನ್ ವತಿಯಿಂದ ಆಯೋಜಿಸಿದ್ದ 42 ನೇ ರಾಜ್ಯ ಮಟ್ಟದ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು.
ನಾನು ಯುವ ಕ್ರೀಡಾಪಟುಗಳನ್ನು ನೋಡಿದ್ದೇನೆ. ಆದರೆ ಇಂದು ವಿಶೇಷವಾಗಿ 30 ರಿಂದ 90 ವರ್ಷದವರೆಗಿನ ಕ್ರೀಡಾ ಸಾಧಕರನ್ನು ನೋಡಿ ಬಹಳ ಸಂತೋಷ ತಂದಿದೆ. ರಾಜ್ಯದಲ್ಲಿ ಇದೊಂದು ವಿಭಿನ್ನ ಕ್ರೀಡಾಕೂಟ ಆಗಿದೆ ಹಿರಿಯ ಸಾಧಕರನ್ನು ಗೌರವಿಸುವ ಕಾರ್ಯಕ್ರಮವಾಗಿದೆ ಎಂದರು.
2 ದಿನಗಳ ಕಾಲ ರಾಜ್ಯದ 31 ಜಿಲ್ಲೆಗಳಿಂದ ಸಾವಿರಾರು ಕ್ರೀಡಾಪಟುಗಳು & ಕ್ರೀಡಾಭಿಮಾನಿಗಳು ಆಗಮಿಸಿರುವ ಈ ಕ್ರೀಡಾಕೂಟದಲ್ಲಿ 30 ರಿಂದ 90 ವರ್ಷದ ವರೆಗಿನ ಮಹಿಳಾ ಮತ್ತು ಪುರುಷ ಅಥ್ಲೆಟ್ ಗಳು ಪಾಲ್ಗೊಂಡಿದ್ದಾರೆ. ಮೊದಲ ದಿನದ ಕ್ರೀಡಾಕೂಟದಲ್ಲಿ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ 5000 ಮೀಟರ್ ವಾಕ್, ಮಹಿಳೆಯರ 3000 ಮೀಟರ್ ವಾಕ್, ಟ್ರಿಪಲ್ ಜಂಪ್, ಹೈ ಜಂಪ್, 1500 ಮೀಟರ್ ಓಟ, ಡಿಸ್ಯಸ್ ಎಸೆತ, 100 ಮೀಟರ್, ಓಟ, ಜಾವೆಲಿನ್ ಎಸೆತ, 200 ಮೀಟರ್ ಓಟ, 5000 ಮೀಟರ್ ಪುರುಷರ ಓಟ ಹಾಗೂ ಮಹಿಳೆಯರಿಗೆ 3000 ಮೀಟರ್ ಓಟದ ಕ್ರೀಡಾಕೂಟ ನಡೆಯಲಿದೆ. 2 ನೇ ದಿನದ ಕ್ರೀಡಾಕೂಟದಲ್ಲಿ ಮಹಿಳೆಯರ ಮತ್ತು ಪುರುಷರ ಓಟ, ಹ್ಯಾಮರ್ ಎಸೆತ, ಲಾಂಗ್ ಜಂಪ್, 800 ಮೀಟರ್ ಓಟ, ಶಾಟ್ ಪುಟ್, ಹೈ ಜಂಪ್, 400 ಮೀಟರ್ ಓಟ, 100 ಮೀಟರ್ ಮತ್ತು 80 ಮೀಟರ್ ಹರ್ಡಲ್ಸ್ ರಿಲೇ ನಡೆಯಲಿದ್ದು ಎಲ್ಲಾ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ವಿಜೇತರಾಗಬೇಕು ಎಂದು ಹಾರೈಸಿದರು.
ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ನಮ್ಮ ರಾಜ್ಯದ ಕ್ರೀಡೆಗಳನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಉತ್ತಮ ತರಬೇತುದಾದರನ್ನು & ತರಬೇತಿಗೆ ಬೇಕಾಗುವ ಧನಸಹಾಯ ಕೂಡ ಕ್ರೀಡಾಪಟುಗಳಿಗೆ ನೀಡುತ್ತಾ ಬರುತ್ತಿದೆ ಎಂದರು.
ಈಗಾಗಲೇ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಇರುವ ಸ್ಥಳೀಯ ಕ್ರೀಡೆಗಳನ್ನು ಗೌರವಿಸಿ ಒಂದು ಜಿಲ್ಲೆ - ಒಂದು ಕ್ರೀಡೆ ಎನ್ನುವ ಘೋಷ ವಾಕ್ಯದಲ್ಲಿ ಸ್ಥಳೀಯ ಕ್ರೀಡೆಗಳನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮುಂದಾಗಿದ್ದೇವೆ ಎಂದು ತಿಳಿಸಿದರು.