ಮಂಗಳೂರಿನ ಕೆಪಿಟಿಗೆ ಅಮೃತ ಮಹೋತ್ಸವದ ಸಂಭ್ರಮ

Update: 2024-07-04 08:50 GMT

ಮಂಗಳೂರು: ರಾಜ್ಯದ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಒಂದಾಗಿರುವ ನಗರದ ಕರ್ನಾಟಕ ಪಾಲಿಟೆಕ್ನಿಕ್(ಕೆಪಿಟಿ) ಸಂಸ್ಥೆ 75ರ (ಅಮೃತ ಮಹೋತ್ಸವ) ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದೆ. ನವೆಂಬರ್‌ನಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಕ್ರೀಡಾಕೂಟ, ಹಳೆ ವಿದ್ಯಾರ್ಥಿ ಸಮ್ಮಿಲನ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮಾಚರಣೆಗೆ ರೂಪು ರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.

ಜತೆಗೆ ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ ಕೆಪಿಟಿ ಆವರಣದಲ್ಲಿ ಸಭಾಭವನ (ಅಡಿಟೋರಿಯಂ) ನಿರ್ಮಾಣಕ್ಕೂ ಸಿದ್ಧತೆ ನಡೆಸಲಾಗಿದೆ.

ಕರ್ನಾಟಕದ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲೇ ಅತ್ಯುನ್ನತ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಮಂಗಳೂರಿನ ಕೆಪಿಟಿಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಅತ್ಯುನ್ನತ ಹುದ್ದೆ, ಉದ್ಯೋಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಂದಾಜಿನ ಪ್ರಕಾರ ಸಂಸ್ಥೆಯ ಆರಂಭದಿಂದ ಈವರೆಗೆ ಸುಮಾರು 70,000ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವಿವಿಧ ರೀತಿಯ ತಾಂತ್ರಿಕ ಶಿಕ್ಷಣವನ್ನು ಪಡೆದಿದ್ದಾರೆ.

ಸಂಪೂರ್ಣವಾಗಿ ಕರ್ನಾಟಕ ಸರಕಾರದ ನಿರ್ವಹಣೆ ಹಾಗೂ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ವ್ಯಾಪ್ತಿಯಲ್ಲಿರುವ ಕೆಪಿಟಿಯ ಅಮೃತ ಮಹೋತ್ಸವದ ಸಂಭ್ರಮದ ನಡುವೆ ಹಳೆ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿಯೂ ಸಂಸ್ಥೆಯ ಸಕ್ರಿಯ ಹಳೆ ವಿದ್ಯಾರ್ಥಿಗಳಿಂದ ಪ್ರಯತ್ನ ಸಾಗುತ್ತಿದೆ.

1946ರಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಆಟೋಮೊಬೈಲ್ ಎಂಬ 4 ಡಿಪ್ಲೊಮಾ ಇಂಜಿನಿಯರಿಂಗ್ ಶಾಖೆ ಗಳೊಂದಿಗೆ ಕರ್ನಾಟಕ (ಸರಕಾರಿ) ಪಾಲಿಟೆಕ್ನಿಕ್ ಹಿಂದಿನ ಮದ್ರಾಸ್ ರಾಜ್ಯ ಸರಕಾರದ ಅಡಿಯಲ್ಲಿ ಪಾಂಡೇಶ್ವರದಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡಿತ್ತು. 1954ರಿಂದ ಮಂಗಳೂರಿನ ಕದ್ರಿ ಹಿಲ್ಸ್‌ನ

ಕ್ಯಾಂಪಸ್‌ನಲ್ಲಿ ಕಾಯಾರಂಭಿಸಿರುವ ಸಂಸ್ಥೆ ಪ್ರಸಕ್ತ 20 ಎಕರೆ ವಿಸ್ತಾರವಾದ ಕ್ಯಾಂಪಸ್ ಹೊಂದಿದೆ. ಸದ್ಯ ಕೆಪಿಟಿಯಲ್ಲಿ ಸಿವಿಲ್ ಇಂಜಿನಿಯರಿಂಗ್ (1946ರಿಂದ ಆರಂಭ), ಅಟೋಮೊಬೈಲ್(1946), ಮೆಕ್ಯಾನಿಕಲ್ ಇಂಜಿನಿಯರಿಂಗ್(1946), ಇಲೆಕ್ಟ್ರಿಕಲ್ ಇಂಜಿನಿಯರಿಂಗ್(1946), ಕೆಮಿಕಲ್ ಇಂಜಿನಿಯರಿಂಗ್(1978), ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್(1994), ಕಂಪ್ಯೂಟರ್ ಸಾಯನ್ಸ್ ಸೇರಿ ಎಂಟು ಡಿಪ್ಲೊಮಾ ಇಂಜಿನಿಯರಿಂಗ್ (2001) ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.

1946ರಲ್ಲಿ ಆರಂಭಗೊಂಡ ಕೆಪಿಟಿಯ ಅಮೃತ ಮಹೋತ್ಸವ ಅಂದರೆ 75ನೆ ವರ್ಷ 2021ರಲ್ಲಿ ಆಚರಿಸಬೇಕಾಗಿತ್ತು. ಆದರೆ ಕೊರೋನ ಕಾರಣ ಮುಂದೂಡಲ್ಪಟ್ಟಿದ್ದ ಆಚರಣೆಯನ್ನು ಈ ವರ್ಷ ವಿಶೇಷ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಆ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಸಕ್ರಿಯವಾಗಿರುವ ಹಳೆ ವಿದ್ಯಾರ್ಥಿ ಸಂಘವು ಸಂಸ್ಥೆಯ ಆಡಳಿತದ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲು ಮುಂದಾಗಿದೆ.

ದೇಶ ವಿದೇಶಗಳಲ್ಲಿ ವಿವಿಧ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿರುವವರು ಸೇರಿದಂತೆ ಸ್ಥಳೀಯ ಹಳೆ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಸುಮಾರು 4000 ದಷ್ಟು ವಿದ್ಯಾರ್ಥಿಗಳ ಮಾಹಿತಿಯನ್ನು ಕಲೆಹಾಕುವ ಕಾರ್ಯ ನಡೆದಿದೆ. 2000ನೆ ಇಸವಿಗಿಂತ ಮೊದಲು ಸಂಸ್ಥೆಯಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳ ವಿಳಾಸ ಮಾತ್ರ ಲಭ್ಯ ಇರುವ ಕಾರಣ ಅವರ ಸಂಪರ್ಕವನ್ನು ಕಲೆ ಹಾಕಿ ಒಗ್ಗೂಡಿಸಿ ಅಮೃತ ಮಹೋತ್ಸವ ಆಚರಣೆಯ ಜತೆಗೆ ಸಂಸ್ಥೆಯ ಮುಂದಿನ ಅಭಿವೃದ್ಧಿಗೆ ಪೂರಕವಾಗಿ ಹೊಸ ವ್ಯವಸ್ಥೆಗಳನ್ನು ಅಳವಡಿಸುವ ಚಿಂತನೆಯೂ ಸಂಸ್ಥೆಯ ಪ್ರಾಂಶುಪಾಲರ ಮುತುವರ್ಜಿಯಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಕೆಪಿಟಿ ಮಂಗಳೂರಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವಾನಂದ ಎಂ.ಸಿ.

ಸುಸಜ್ಜಿತ ಅಡಿಟೋರಿಯಂ ರಚನೆಯ ಚಿಂತನೆ: ದೇಶದ ಎರಡನೇ ಸರಕಾರಿ ಸ್ವಾಯತ್ತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಮಾನ್ಯತೆ ಪಡೆಯುವ ಹಾದಿಯಲ್ಲಿರುವ ಕೆಪಿಟಿಯ ಸಂಕೀರ್ಣದಲ್ಲಿ ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ ಸುಸಜ್ಜಿತ ಅಡಿಟೋರಿಯಂ ನಿರ್ಮಾಣದ ಚಿಂತನೆ ನಡೆದಿದ್ದು, ಈಗಾಗಲೇ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಎರಡು ಅಂತಸ್ತಿನ ಅಂದಾಜು 3.5 ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ ನಿರ್ಮಿಸಲು ಸರಕಾರದ ಸಹಭಾಗಿತ್ವದಲ್ಲಿ ಕೆಪಿಟಿ ಕ್ಯಾಂಪಸ್‌ನಲ್ಲಿ ಜಾಗವನ್ನು ಗುರುತಿಸಲಾಗಿದೆ. ಸರಕಾರದ ಒಪ್ಪಿಗೆ ದೊರೆತಾಕ್ಷಣ ಶಿಲಾನ್ಯಾಸ ನೆರವೇರಲಿದೆ ಎಂದು ಕೆಪಿಟಿಯ ಪ್ರಾಂಶುಪಾಲ ಹರೀಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಕೆಪಿಟಿಯ 75ನೇ ಸಂಭ್ರಮವು ನವೆಂಬರ್‌ನಲ್ಲಿ ಮೂರು ದಿನಗಳ ರಾಜ್ಯ ಮಟ್ಟದ ಕ್ರೀಡಾಕೂಟ ಮಂಗಳೂರಿನಲ್ಲಿ ನಮ್ಮ ಕೆಪಿಟಿ ನೇತೃತ್ವದಲ್ಲಿ ನಡೆಸುವ ಮೂಲಕ ಆರಂಭಗೊಳ್ಳಲಿದೆ. ರಾಜ್ಯ ಮಟ್ಟದ ಕ್ರೀಡಾಕೂಟ ಆದ ಕಾರಣ ಸುಮಾರು 300ರಷ್ಟು ಕೆಪಿಟಿ ಸಂಸ್ಥೆಯ 2,000ಕ್ಕೂ ಅಧಿಕ ಮಂದಿ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬಳಿಕ ಹಳೆ ಒಂದು ದಿನ ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಸಂಸ್ಥೆಯ ಹಳೆ ಶಿಕ್ಷಕರು, ಸಿಬ್ಬಂದಿಯ ಸಹಮಿಲನ, ಹೈಸ್ಕೂಲ್ ಮಕ್ಕಳ ಕಲಿಕೆಗೆ ಪೂರಕವಾದ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ. ಜುಲೈ 19ರವರೆಗೆ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಕಾರ್ಯಕ್ರಮಗಳ ರೂಪು ರೇಷೆ ಸಿದ್ಧ ಪಡಿಸಲಾಗುವುದು.

-ಹರೀಶ್ ಶೆಟ್ಟಿ, ಪ್ರಾಂಶುಪಾಲರು, ಕೆಪಿಟಿ 

‘ಲಕ್ಷಾಂತರ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡಿರುವ ಕರ್ನಾಟಕದ ಹೆಮ್ಮೆಯ ಸಂಸ್ಥೆ ಮಂಗಳೂರಿನ ಕೆಪಿಟಿ. ಸಂಸ್ಥೆಯ 75ರ ಸಂಭ್ರಮವನ್ನು ನವೆಂಬರ್‌ನಲ್ಲಿ ಆಚರಿಸುವ ಜೊತೆಗೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ರೂಪಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಲಭ್ಯ ಇರುವ ಹಳೆ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿ ಒಗ್ಗೂಡಿಸಲಾಗುತ್ತಿದೆ. ದೇಶದ ಎರಡನೇ ಸ್ವಾಯತ್ತ ಸರಕಾರಿ ಪಾಲಿಟೆಕ್ನಿಕ್ ಸಂಸ್ಥೆಯಾಗಿ ಮಾನ್ಯತೆ ಪಡೆಯುವ ಹಾದಿಯಲ್ಲಿರುವ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಈಗಿನ ಅಗತ್ಯ, ಬೇಡಿಕೆಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.

-ದೇವಾನಂದ ಎಂ.ಸಿ., ಅಧ್ಯಕ್ಷರು, ಹಳೆ ವಿದ್ಯಾರ್ಥಿಗಳ ಸಂಘ-ಕೆಪಿಟಿ ಮಂಗಳೂರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News