ಮಂಗಳೂರು| ಮಾದಕ ವಸ್ತು ಮಾರಾಟ ಆರೋಪ: ನೈಜೀರಿಯಾ ಪ್ರಜೆ ಬಂಧನ

Update: 2024-12-17 16:56 GMT

ಮಂಗಳೂರು: ಗೋವಾದಿಂದ ಮಂಗಳೂರು ನಗರಕ್ಕೆ ಮಾದಕ ವಸ್ತು ಕೋಕೇನ್‌ನ್ನು ಮಾರಾಟ ಮಾಡುತ್ತಿದ್ದ ಪ್ರಸ್ತುತ ಗೋವಾದಲ್ಲಿ ವಾಸ್ತವ್ಯವಿರುವ ನೈಜೀರಿಯಾ ದೇಶದ ಪ್ರಜೆಯನ್ನು ಪತ್ತೆ ಹಚ್ಚಿ 30 ಗ್ರಾಂ ಕೋಕೆನ್‌ನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನೈಜೀರಿಯಾದ ಮೈಕೆಲ್ ಒಕ್ಫಾರ್ ಒಡಿಕ್ಪೊ (44) ಬಂಧಿತ ಆರೋಪಿ.

ಪ್ರಕರಣದ ವಿವರ : 2024ನೇ ಮಾರ್ಚ್ ತಿಂಗಳಲ್ಲಿ ಉಳ್ಳಾಲದ ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕೋಕೆನ್ ಮಾರಾಟ ಮಾಡುತ್ತಿದ್ದ ಅಂಬ್ಲಮೊಗರು ನಿವಾಸಿಗಳಾದ ಸದಕತ್ ಶಾನ್ ನವಾಝ್, ಅಶ್ಫಕ್ ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಇವರು ಗೋವಾದಿಂದ ಕೋಕೆನ್ ಖರೀದಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಬಂಧಿತರ ವಶದಿಂದ 34 ಗ್ರಾಂ ಕೋಕೆನ್ ಹಾಗೂ ಇತರ ಒಟ್ಟು ರೂ. 2,72,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಕೋಕೆನ್ ನೀಡಿದ ಗೋವಾದ ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಉತ್ತರ ಗೋವಾದ ಕಾಲನ್ ಗೂಟ್ ಎಂಬಲ್ಲಿಂದ ವಶಕ್ಕೆ ಪಡೆದಿದ್ದಾರೆ.

ಆತನ ವಶದಿಂದ 30 ಗ್ರಾಂ ಕೋಕೆನ್, ಸಾಗಾಟಕ್ಕೆ ಉಪಯೋಗಿಸಿದ ಕಾರು, ಮೊಬೈಲ್ ಫೋನ್ ಗಳು-2, ನಗದು ಹಣ 4500 ರೂ. ಡಿಜಿಟಲ್ ತೂಕ ಮಾಪನ ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 11,25,000 ರೂ. ಆಗಿರುತ್ತದೆ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಸೆನ್ ಕ್ರೈಂ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಆರೋಪಿಯು 2012ನೇ ಇಸವಿಯಲ್ಲಿ ಭಾರತಕ್ಕೆ ವ್ಯಾಪಾರದ ವೀಸಾದಲ್ಲಿ ಆಗಮಿಸಿ ಮುಂಬೈಯಲ್ಲಿ ಸುಮಾರು ಒಂದೂವರೆ ವರ್ಷ ನೆಲೆಸಿದ್ದನು. ನಂತರ ಗೋವಾಕ್ಕೆ ಬಂದು ಗೋವಾದಲ್ಲಿ ವಾಸ್ತವ್ಯವಿದ್ದು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು, ಈತನ ವಿರುದ್ಧ ಗೋವಾದಲ್ಲಿ ಒಟ್ಟು 3 ಮಾದಕ ವಸ್ತು ಮಾರಾಟ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್‌ಐ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News