ಸರ ಕಳ್ಳತನ ಪ್ರಕರಣ: ಆರೋಪಿ ಸೆರೆ
ಮಂಗಳೂರು, ಡಿ.17: ತೆಂಕಎಡಪದವು ಗ್ರಾಮದ ಶಿಬ್ರಿಕೆರೆ ಗಣೇಶ್ ಮಿಲ್ ಬಳಿ ಇರುವ ಒಳ ರಸ್ತೆಯಲ್ಲಿ ಡಿ.12ರಂದು ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಸರ ಎಳೆದೊಯ್ದಿದ್ದ ಪ್ರಕರಣದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಹಳೆಯಂಗಡಿಯ ಇಂದಿರಾ ನಗರ ನಿವಾಸಿ ಅಬ್ದುಲ್ ರವೂಫ್ ಯಾನೆ ಆಟೋ ರವೂಫ್ (30) ಬಂಧಿತ ಆರೋಪಿ. ಈತನಿಂದ ಮಹಿಳೆಯ ಕುತ್ತಿಗೆಯಿಂದ ಎಳೆದೊಯ್ದಿದ್ದ 70 ಸಾವಿರ ರೂ. ಮೌಲ್ಯದ ಚಿನ್ನದ ಸರ, 50 ಸಾವಿರ ರೂ. ಮೌಲ್ಯದ ಸ್ಕೂಟರ್, 50 ಸಾವಿರ ರೂ. ಮೌಲ್ಯದ ಆಟೋ ರಿಕ್ಷಾ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆ, ಮೂಲ್ಕಿ, ಬಜ್ಪೆ, ಉಪ್ಪಿನಂಗಡಿ, ಹಾಸನ ಜಿಲ್ಲೆಯ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಸುಲಿಗೆ ಮತ್ತು ಕಳವಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಈತ 2 ತಿಂಗಳ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.