ಮಂಗಳೂರು: ಡಿ.21ರಿಂದ ಕರಾವಳಿ ಉತ್ಸವ

Update: 2024-12-18 07:26 GMT

ಮಂಗಳೂರು, ಡಿ. 18: ಕರಾವಳಿ ಸಂಸ್ಕೃತಿಯ ಅನಾವರಣದೊಂದಿಗೆ ಡಿ. 21ರಿಂದ ಜನವರಿ 19ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವವನ್ನು ಆಯೋಜಿಲು ಸಿದ್ಧತೆ ನಡೆಸಿರುವ ದ.ಕ. ಜಿಲ್ಲಾಡಳಿತವು, ಉತ್ಸವದ ವಿಶೇಷ ಆಕರ್ಷಣೆಯಾಗಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನಕ್ಕೆ ಮುಂದಾಗಿದೆ.

ಡಿ. 22ರಂದು ನಗರ ಕದ್ರಿ ಪಾರ್ಕ್‌ನಲ್ಲಿ ಸಂಜೆ 4 ಗಂಟೆಗೆ ರೊಬೊಟಿಕ್ ಬಟರ್ ಫ್ಲೈ ಪಾರ್ಕ್ ಪ್ರದರ್ಶನ ಆರಂಭಗೊಳ್ಳಲಿದೆ. ಕರಾವಳಿ ಉತ್ಸವದುದ್ದಕ್ಕೂ ಈ ಪ್ರದರ್ಶನ ಸಂಜೆ 4ರಿಂದ ರಾತ್ರಿ 9ಗಂಟೆಯವರೆಗೆ ವಿಶೇಷ ಆಕರ್ಷಣೆಯಾಗಿ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕರಾವಳಿ ಉತ್ಸವದ ಸಿದ್ಧತೆಗಳ ಕುರಿತಂತೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕನ್ನಡ, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ ಅಕಾಡೆಮಿಗಳ ಸಹಕಾರದೊಂದಿಗೆ ನಡೆಯಲಿರುವ ಉತ್ಸವದಲ್ಲಿ ಕರಾವಳಿಯ ವೈವಿಧ್ಯತೆಗಳು ಸಾರ್ವಜನಿಕರನ್ನು ರಂಜಿಸಲಿವೆ ಎಂದರು.

ಡಿಸೆಂಬರ್ 21 ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಸಂಜೆ 4ಕ್ಕೆ ಕೊಡಿಯಾಲ್ ಬೈಲ್ ನ ಕೆನರಾ ಕಾಲೇಜಿನಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಸಂಸ್ಕೃತಿ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಕಲಾವಿದರ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಸಂಜೆ 5.30ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ಕರಾವಳಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಎರಡು ದಿನಗಳ ಕಾಲ ವಿದ್ಯುದ್ದೀಪಗಳಿಂದ ಅಲಂಕೃತವಾದ ವೇದಿಕೆಯಲ್ಲಿ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ ಎಂದವರು ತಿಳಿಸಿದರು.

ವಸ್ತು ಪ್ರದರ್ಶನವು ಜಾಗತಿಕ ಹಳ್ಳಿ (ಗ್ಲೋಬಲ್ ವಿಲೇಜ್) ಎಂಬ ಪರಿಕಲ್ಪನೆಯಲ್ಲಿ ಕರಾವಳಿಯ ನೈಜ ಸಂಸ್ಕೃತಿ, ಸಂಪ್ರದಾಯ, ಸಾಹಿತ್ಯ, ಉಡುಗೆ ತೊಡುಗೆ ಮತ್ತು ಖಾದ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಕೂಡಿರಲಿದೆ. ವಿವಿಧ ಜನಾಂಗದ ರೀತಿ ರಿವಾಜುಗಳನ್ನು ಪರಿಚಯಿಸಲು ಪ್ರತ್ಯೇಕ ವಿಭಾಗಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಇಲ್ಲಿ ಕೈಮಗ್ಗ, ನೇಕಾರ,ಕುಂಬಾರ, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಇನ್ನಿತರ ಕೌಶಲ್ಯಗಳ ಅನಾವರಣವಾಗಲಿದೆ. ಆದಿವಾಸಿ ಮತ್ತು ಗುಡ್ಡಗಾಡು ಜನಾಂಗದ ಸಾಂಪ್ರದಾಯಿಕ ಉತ್ಪನ್ನಗಳು ಸಹ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದಲ್ಲದೆ ವಸ್ತು ಪ್ರದರ್ಶನಕ್ಕಾಗಿ ಒಟ್ಟು 60 ಮಳಿಗೆಗಳ ವ್ಯವಸ್ಥೆ ಮಾಡಲಾಗಿದ್ದು ಈಗಾಗಲೇ 39ರಷ್ಟು ಮಳಿಗೆಗಳು ಬುಕ್ ಆಗಿವೆ. ಹೆಚ್ಚು ಮಳಿಗೆಗಳಿಗೆ ಬೇಡಿಕೆ ಬಂದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಇದಲ್ಲದೆ ಅಮ್ಯೂಸ್‌ಮೆಂಟ್‌ಪಾರ್ಕ್ ವ್ಯವಸ್ಥೆಯೂ ಕರಾವಳಿ ಉತ್ಸವದಲ್ಲಿ ಲಭ್ಯವಾಗಲಿದೆ. ಕರಾವಳಿಯ ವೈವಿಧ್ಯಮಯ ಖಾದ್ಯಗಳ ತಯಾರಿಕೆ, ಪ್ರದರ್ಶನ ಮತ್ತು ಮಾರಾಟಗಳನ್ನು ಒಂದೇ ಸೂರಿನಡಿ ಏರ್ಪಡಿಸಲಾಗಿದ್ದು, ತುಳು ನಾಡಿನ ತಿಂಡಿ ತಿನಿಸುಗಳನ್ನು ಪರಿಚಯ ಮಾಡಿಕೊಳ್ಳಲು ಮತ್ತು ಸವಿಯಲು ಸಾರ್ವಜನಿಕರಿಗೆ ಇದೊಂದು ಅಪರೂಪದ ಅವಕಾಶವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿವರಿಸಿದರು.

ಜಿಲ್ಲಾಡಳಿತದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆ ಇವುಗಳ ಸಹಕಾರದಿಂದ ಆಕರ್ಷಕವಾಗಿ ಕರಾವಳಿ ಉತ್ಸವವನ್ನು ನಡೆಸಲು ರೂಪುರೇಷೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ. ಸಿಇಒ ಡಾ. ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮೂರು ವರ್ಷಗಳ ಬಳಿಕ ಕರಾವಳಿ ಉತ್ಸವ: 20 ಲಕ್ಷ ರೂ. ಬಿಡುಗಡೆ

ಬೆಳಗಾವಿಯ ಸುವರ್ಣ ಸೌಧದಿಂದ ಆನ್‌ಲೈನ್ ಮೂಲಕ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ ಸ್ಪೀಕರ್ ಯು.ಟಿ.ಖಾದರ್, ರಾಜ್ಯದ ಜನತೆಗೆ ಕರಾವಳಿ ಉತ್ಸವಕ್ಕೆ ಆಹ್ವಾನ ನೀಡಿದರು.

ಮೂರು ವರ್ಷಗಳ ಬಳಿಕ ಮಂಗಳೂರಿನಲ್ಲಿ ಸಂಭ್ರಮದ ಕರಾವಳಿ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಕರಾವಳಿಯ ಸೌಹಾರ್ದತೆಯ ಜತೆಗೆ ಸಂಸ್ಕೃತಿಯ ಅನಾವರಣದ ವೇದಿಕೆಯಾಗಿ ಕರಾವಳಿ ಉತ್ಸವ ನಡೆಯಲಿದೆ. ರಾಜ್ಯದ ಇತರ ಜಿಲ್ಲೆಗಳು, ವಿವಿಧರಾಜ್ಯಗಳ ಪ್ರದರ್ಶನದ ಜತೆಗೆ ಕರಾವಳಿಯ ವೈವಿಧ್ಯತೆಯನ್ನು ಉತ್ಸವದ ಮೂಲಕ ಪ್ರತಿಬಿಂಬಿಸಲಾಗುವುದು . ಇದಕ್ಕಾಗಿ ಸರಕಾರ ಈಗಾಗಲೇ 20 ಲಕ್ಷ ರೂ. ಬಿಡುಗಡೆ ಮಾಡಿದೆ. ವಿವಿಧ ಇಲಾಖೆಗಳು ಹಾಗೂ ವಿವಿಧ ಖಾಸಗಿ ಸಂಸ್ಥೆಗಳ ಸಹಕಾರದಲ್ಲಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಕ್ರಮ ವಹಿಸಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ರಾಜೇಶ್ ನಾಯ್ಕ್ ಮೊದಲಾದವರು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕರಾವಳಿ ಉತ್ಸವದ ಲೋಗೋವನ್ನು ಆನ್‌ಲೈನ್ ಮೂಲಕ ಅನಾವರಣಗೊಳಿಸಲಾಯಿತು.

 


ಡಿ.28- 29ರಂದು ಬೀಚ್ ಉತ್ಸವ

ತಣ್ಣೀರು ಬಾವಿ ಬೀಚ್‌ನಲ್ಲಿ ಡಿ. 28 ಮತ್ತು 29ರಂದು ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಸಂಜೆ 6 ಗಂಟೆಗೆ ಬೀಚ್ ಉತ್ಸವ ಉದ್ಘಾಟನೆಗೊಳ್ಳಲಿದೆ. ಸಂಜೆ 6.30 ರಿಂದ ವಿವಿಧ ತಂಡಗಳ ನೃತ್ಯ ಪ್ರದರ್ಶನಗಳು ನಡೆಯಲಿವೆ. ಹೊಸ ತಲೆಮಾರಿನ ವಿಶಿಷ್ಟ ಸಂಗೀತ ಸಂಯೋಜಕರು ಮತ್ತು ಗಾಯಕ ರಘು ದೀಕ್ಷಿತ್ ತಂಡದ ಕಾರ್ಯಕ್ರಮ ರಾತ್ರಿ 8ಕ್ಕೆ ಪ್ರಾರಂಭವಾಗಲಿದ್ದು ಸಾರ್ವಜನಿಕರನ್ನು ರಂಜಿಸಲಿದೆ.

ಡಿ. 29 ರಂದು ಬೆಳಗ್ಗೆ 5:30ಕ್ಕೆ ಯೋಗ, 6:30ಕ್ಕೆ ಜುಂಬ (ಏರೋನಾಟಿಕ್ಸ್) ಮತ್ತು 9ಕ್ಕೆ ಬೀಚ್ ಸ್ಪೋರ್ಟ್ಸ್ ಮೊ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಸಂಜೆ 5:30ಕ್ಕೆ ಆನ್‌ಲೈನ್ ಮೂಲಕ ನೃತ್ಯಪ್ರದರ್ಶನ ನಡೆಯಲಿದೆ ಮತ್ತು ರಾತ್ರಿ 8 ಗಂಟೆಗೆ ಶೋರ್ ಬ್ಯಾಂಡ್ ಪ್ರದರ್ಶನಗಳು ನಡೆಯಲಿವೆ.

ಕರಾವಳಿ ಉತ್ಸವದ ಇತರ ವಿಶೇಷತೆಗಳು

ಜನವರಿ 4 ಮತ್ತು 5 ರಂದು ಕದ್ರಿ ಪಾರ್ಕ್‌ನಲ್ಲಿ ಅಟೋಮೊಬೈಲ್ ಮತ್ತು ಶ್ವಾನ ಪ್ರದರ್ಶನ ನಡೆಯಲಿದೆ.

ಜನವರಿ 11 ಮತ್ತು 12 ರಂದು ಕದ್ರಿ ಪಾರ್ಕ್‌ನಲ್ಲಿ ಯುವ ಉತ್ಸವ ನಡೆಯಲಿದೆ.

ಜನವರಿ 18 ಮತ್ತು 19 ರಂದು ತಣ್ಣೀರು ಬಾವಿ ಬೀಚ್‌ನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News