ಸೌಜನ್ಯ ಹತ್ಯೆ ಖಂಡಿಸಿ ಪುತ್ತೂರಿನಲ್ಲಿ ಬೃಹತ್ ಜನಜಾಗೃತಿ ಜಾಥಾ, ಸಭೆ

Update: 2023-08-28 17:17 GMT

ಪುತ್ತೂರು : ಧರ್ಮಸ್ಥಳದಲ್ಲಿ ಸೌಜನ್ಯನಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯಪೀಠ ಮತ್ತು ಧರ್ಮಪೀಠದಲ್ಲಿ ನ್ಯಾಯ ಸಿಕ್ಕಿಲ್ಲ. ಈ ಗ್ಯಾಂಗ್ ರೇಪ್ ಮತ್ತು ಕೊಲೆಯ ಹಿಂದೆ ಎಷ್ಟೊಂದು ಮನೆಗಳ ನೋವು ಮತ್ತು ಕಣ್ಣೀರು ಇದೆ. ನ್ಯಾಯಪೀಠ ಮತ್ತು ಧರ್ಮಪೀಠದಲ್ಲಿ ನ್ಯಾಯ ದೊರಕದಿದ್ದಲ್ಲಿ ನಾವು ಯಾರಲ್ಲಿ ನ್ಯಾಯ ಕೇಳಬೇಕು. ಕೊಲೆಗೀಡಾದ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಹೋರಾಟಕ್ಕೆ ಇಳಿದವರು ನಾವು. ಇದರ ಜೊತೆಗೆ ಧರ್ಮ ಪೀಠದಲ್ಲಿ ಧರ್ಮ ಉಳಿಯಬೇಕು ಎಂಬುದೂ ನಮ್ಮ ಉದ್ದೇಶ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಒಂದು ಪಾಯಿಂಟ್‍ನಷ್ಟು ಇಡದೆ ಸಾಕ್ಷ್ಯಗಳನ್ನು ನಾಶ ಮಾಡುವ ಕೆಲವನ್ನು ತನಿಖಾಧಿಕಾರಿಗಳು ಮಾಡಿದ್ದು, ಇದೀಗ 11 ವರ್ಷಗಳ ಬಳಿಕ ಕೆಲ ಪೊಲೀಸರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ನಾವೇ ಇನ್ವೆಸ್ಟಿಗೇಷನ್ ಮಾಡಿ ಈ ಪಾಪಿಗಳನ್ನು ಪೋಸ್ಟ್‌ಮಟಂ ಮಾಡಬೇಕಾಗಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ಹೇಳಿದರು.

ಪುತ್ತೂರಿನ ಅಭಿನವ ಭಾರತ ಮಿತ್ರ ಮಂಡಳಿ ಮತ್ತು ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆಯ ವತಿಯಿಂದ ಸೋಮವಾರ ಸಂಜೆ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪುತ್ತೂರಿನಲ್ಲಿ ನಡೆದ ಜನಜಾಗೃತಿ ಜಾಥಾ ಮೆರಣಿಗೆಯ ಬಳಿಕ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾನೂನು ವ್ಯವಸ್ಥೆಯೊಳಗೆ ಕಳ್ಳರಿದ್ದಾರೆ. ಇದರಿಂದಾಗಿ ನಾವು ಕಾನೂನು ವ್ಯವಸ್ಥೆಯ ಬಗ್ಗೆ ನಂಬಿಕೆ ಕಳಕೊಳ್ಳುವಂತಾ ಗಿದೆ. ಉಳ್ಳವರಿಗೆ ಮಾತ್ರ ಕಾನೂನು ಎಂಬ ವ್ಯವಸ್ಥೆಯಿಂದಾಗಿ ನಾವಿಂದು ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗಿ ಬಂದಿದೆ ಎಂದ ಅವರು ಸೌಜನ್ಯ ಕೊಲೆ ಪ್ರಕರಣದ ತನಿಖಾಧಿಕಾರಿಗಳು ತಮ್ಮ ಮಕ್ಕಳಿಗೆ ಇಂತಹ ಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಈ ಹೋರಾಟ ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮಟ್ಟದ ಲ್ಲಿಯೂ ನಡೆಯಬೇಕಾದೀತು ಎಂದು ಅವರು ಹೇಳಿದರು.

ದೇವರ ಹೆಸರು ಹಾಳಾಗುತ್ತದೆ ಎಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಮುಖಂಡರು ಹೇಳುತ್ತಿದ್ದಾರೆ. ಆದರೆ ನ್ಯಾಯಪೀಠದಲ್ಲಿ, ಧರ್ಮಪೀಠದಲ್ಲಿ ಅತ್ಯಾಚಾರ-ಕೊಲೆ ಘಟನೆಗಳು ನಡೆದರೆ ಕ್ಷೇತ್ರದ ಪಾವಿತ್ರತ್ಯತೆಗೆ ಧಕ್ಕೆಯಾಗುವು ದಿಲ್ಲವೇ ಎಂದು ಪ್ರಶ್ನಿಸಿದ ಅವರು ಧಾರ್ಮಿಕ ಭಯೋತ್ಪಾದನೆಯನ್ನು ನಾವು ಬೆಂಬಲಿಸುತ್ತಿದ್ದೇವೆ ಎಂದು ನಾನು 25 ವರ್ಷಗಳ ಹಿಂದೆಯೇ ಹೇಳಿದ್ದೆ ಎಂದರು. ಸೌಜನ್ಯ ಹತ್ಯೆಗೆ ಸಂಬಂಧಿಸಿ ಸಂತೋಷ್ ರಾವ್ ನಿರಪರಾಧಿಯಾಗಿ ಬಂದ ಮೇಲೆ ನೈಜ ಆರೋಪಿಗಳು ಯಾರು, ಅವರ ಹಿಂದೆ ಇರುವ ಕಾಮಾಂಧರು ಯಾರು ಎಂಬ ಪ್ರಶ್ನೆ ಎದಿದ್ದು, ಈ ಪ್ರಶ್ನೆಗೆ ಉತ್ತರ ಸಿಗುವ ತನಕ ಹೋರಾಟ ನಡೆಯಬೇಕಿದೆ ಎಂದು ಅವರು ತಿಳಿಸಿದರು.

ಸೌಜನ್ಯ ಅವರ ತಾಯಿ ಕುಸುಮಾವತಿ ಮಾತನಾಡಿ ಧರ್ಮಸ್ಥಳದಿಂದ ನಮಗೆ ತುಂಬಾ ಅನ್ಯಾಯವಾಗಿದೆ. ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್‍ನವರ ಜೊತೆಗೆ ನಾನು ದೇವರ ನಡೆಯಲ್ಲಿ ಪ್ರಾರ್ಥಿಸಲೆಂದು ತೆರಳಿದ್ದ ಸಂದರ್ಭದಲ್ಲಿ ನನಗೆ ಒಳಗೆ ಹೋಗಲು ಅವಕಾಶ ನೀಡಿಲ್ಲ. ಪೊಲೀಸರು ಮತ್ತು ಧರ್ಮಸ್ಥಳದ ಸ್ವಸಹಾಯ ಸಂಘದವರನ್ನು ಅಡ್ಡ ನಿಲ್ಲಿಸಿ ನಮ್ಮನ್ನು ಒಳಗೆ ಬಿಡದೆ ಗೇಟು ಹಾಕಿದ್ದಾರೆ. ಅಲ್ಲದೆ ಶಾಂಭವಿ ಎಂಬಾಕೆಯ ಮೂಲಕ ನನಗೆ ಸವಾಲು ಹಾಕಿಸಿದರು. ಅಲ್ಲದೆ ಬೆಳ್ತಂಗಡಿಯ ಕೇಶವ ಎಂಬ ವಕೀಲನೂ ಅವರೊಂದಿಗೆ ಸೇರಿಕೊಂಡಿದ್ದ. ನಾನು ನಂಬುವ ದೇವರ ಬಳಿಗೆ ಹೋಗಬಾರದು ಎನ್ನಲು ಇವರು ಯಾರು? ನಾನು ನಾಳೆಯೂ ದೇವರ ಬಳಿ ಹೋಗುತ್ತೇನೆ ಇವರಿಗೆ ತಾಖತ್ತಿದ್ದರೆ ತಡೆಯಲಿ ಎಂದ ಅವರು ನಮಗೆ ಅಲ್ಲಿ ಜೀವ ಬೆದರಿಕೆ ಇದೆ. ತಿಮರೋಡಿ ಅವರಿಂದಾಗಿ ಬದುಕಿ ಉಳಿದಿದ್ದೇವೆ. ಇಲ್ಲದಿದ್ದಲ್ಲಿ ನಮ್ಮನ್ನು ಕೊಂದು ಹೊಳೆಗೆ ಎಸೆಯುತ್ತಿದ್ದರು ಎಂದರು.

ನನ್ನ ಮಗಳಿಗೆ ಆಗಿರುವ ಸ್ಥಿತಿ ಇನ್ನೊಂದು ಹೆಣ್ಣು ಮಗುವಿಗೆ ಆಗಬಾರದು ಎಂಬ ನಿಟ್ಟಿನಲ್ಲಿ ನಾನು ಈ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಮಗಳನ್ನು ಕೊಂದವರು ಯಾರೆಂದು ನನಗೆ ಗೊತ್ತಿದೆ. ಅವರನ್ನು ಬಂಧಿಸಿ ಮಂಪರು ಪರೀಕ್ಷೆ ನಡೆಸಿದಲ್ಲಿ ಎಲ್ಲಾ ಸತ್ಯ ಹೊರ ಬರಬಹುದು. ಬಿಜೆಪಿಯವರು ಇದೀಗ ನನ್ನ ಮಗಳ ಬಗ್ಗೆ ಹೋರಾಟ ನಡೆಸುತ್ತಿ ದ್ದಾರೆ. ಆದರೆ 11 ವರ್ಷಗಳಿಂದ ಅವರು ನಮಗೆ ನ್ಯಾಯ ಕೊಟ್ಟಿಲ್ಲ. ನಳಿನ್ ಕುಮಾರ್ ಕಟೀಲ್ ಅವರೂ ನಮಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿಲ್ಲ. ಮುಂದಿನ ದಿನಗಳಲ್ಲಿ ನಮಗೆ ಪ್ರಧಾನಿ ಮೋದಿ ಬಳಿ ಹೋಗಿ ನ್ಯಾಯ ಕೇಳಬೇಕು ಅದಕ್ಕಾಗಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸೌಜನ್ಯ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಸಂತೋಷ್ ರಾವ್ ಅವರ ಪರವಾಗಿ ವಾದಿಸಿದ್ದ ನ್ಯಾಯವಾದಿಗಳಾದ ಮೋಹಿತ್ ಕುಮಾರ್ ಮತ್ತು ನವೀನ್ ಪದ್ಯಾಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಅಭಿನವ ಭಾರತ ಮಿತ್ರ ಮಂಡಳಿಯ ಅಧ್ಯಕ್ಷ ಧನ್ಯಕುಮಾರ್ ಬೆಳಂದೂರು ಉಪಸ್ಥಿತರಿದ್ದರು.

ಜನಜಾಗೃತಿ ಮೆರವಣಿಗೆಯ ಜಾಥಾವು ದರ್ಬೆ ಸರ್ಕಲ್ ಬಳಿಯಿಂದ ಆರಂಭಗೊಂಡು ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಬಾಗದ ರಥಬೀದಿಯಲ್ಲಿ ಮುಂದುವರಿದು ಖಾಸಗಿ ಬಸ್ಸು ನಿಲ್ದಾಣದ ಬಳಿಯಲ್ಲಿನ ಸಭಾ ವೇದಿಕೆಯ ಬಳಿ ಸಮಾಪ್ತಿಗೊಂಡಿತು. ಅಭಿನವ ಭಾರತ ಮಿತ್ರ ಮಂಡಳಿಯ ಪ್ರವರ್ತಕರಾದ ದಿನೇಶ್ ಜೈನ್ ಸ್ವಾಗತಿಸಿದರು. ನವೀನ್ ಕುಲಾಲ್ ನಿರೂಪಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News