ರೈಲ್ವೆಯ ಬೇಡಿಕೆ ಈಡೇರಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವರಿಗೆ ಮನವಿ

Update: 2023-08-03 15:42 GMT

ಮಂಗಳೂರು: ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದರೊಂದಿಗೆ ಮಂಗಳೂರಿಗೆ ವಿಶೇಷ ಆದ್ಯತೆ ನೀಡಿ ರೈಲ್ವೆ ಯೋಜನೆಗಳನ್ನು ಒದಗಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಹೊಸದಿಲ್ಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಿಸಬೇಕು, ಮಂಗಳೂರು ಕೇಂದ್ರ ರೈಲು ನಿಲ್ದಾಣದ ಎಲ್ಲಾ ಪ್ಲಾಟ್ ಫಾರ್ಮ್‌ಗಳಿಗೂ ರೂಫಿಂಗ್ ಅಳವಡಿಸಬೇಕು, ಮಂಗಳೂರು-ಬೆಂಗಳೂರು ನಡುವ ಹಳಿ ಡಬ್ಲಿಂಗ್ ಮಾಡಿಸಬೇಕು, ಮಂಗಳೂರು- ಬೆಂಗಳೂರು ನಡುವೆ ರೈಲ್ವೆ ಲೈನ್ ಸಂಪೂರ್ಣ ವಿದ್ಯುದ್ದೀಕರಣಗೊಳಿಸಬೇಕು, ಪಾಂಡೇಶ್ವರದಲ್ಲಿ ೪ ಲೈನ್ ಆರ್‌ಒಬಿ ನಿರ್ಮಿಸಬೇಕು, ಸುಬ್ರಹ್ಮಣ್ಯದಲ್ಲಿ ಹೆಚ್ಚುವರಿ ಟರ್ಮಿನಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಳಿನ್ ಮನವಿ ಮಾಡಿದ್ದಾರೆ.

* ಸಚಿವರೊಂದಿಗೆ ಮಾತುಕತೆ ನಡೆಸಿರುವ ನಳಿನ್, ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ರೈಲಿನ ಮರು ಪ್ರಾರಂಭಿಸಬೇಕು, ಮಂಗಳೂರು-ಬೆಂಗಳೂರು ನಡುವೆ ಮತ್ತು ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಬೇಕು, ತಿರುವನಂತಪುರ-ಕಾಸರಗೋಡು ನಡುವೆ ಓಡುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರುವರೆಗೆ ವಿಸ್ತರಿಸಬೇಕು, ಮಂಗಳೂರು ಕೇಂದ್ರ ನಿಲ್ದಾಣ-ಕಲಬುರ್ಗಿ/ಬೀದರ್‌ಗೆ ಹಾಸನ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಗುಂಟಕಲ್, ಮಂತ್ರಾಲಯ ರಸ್ತೆ, ರಾಯಚೂರು, ಯಾದ್ಗೀರ್, ವಾಡಿ ಮೂಲಕ ಹೊಸ ರೈಲು ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ಮರು ಓಡಾಟ, ಪುಣೆಯವರೆಗೆ ರೈಲು ವಿಸ್ತರಣೆ, ಮಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ರಾಮೇಶ್ವರಕ್ಕೆ ಮತ್ತು ವರಣಾಸಿಗೆ ಹಾಗೂ ಕರೈಕಲ್‌ಗೆ ಹೊಸ ರೈಲು ಓಡಾಟಕ್ಕೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

*ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಲ್ಲಿ ಮೇಲ್ದರ್ಜೆಗೇರುತ್ತಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ, ಬಂಟ್ವಾಳ- ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣ ಕಾಮಗಾರಿಗೂ ಶೀಘ್ರ ಶಿಲಾನ್ಯಾಸ ನೆವೇರಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News