ಪೊಲೀಸರ ಕ್ಷೇಮಾಭಿವೃದ್ಧಿಗೆ ನಿಧಿ ಸಂಗ್ರಹ ಸೂಕ್ತವಲ್ಲ: ನಿವೃತ್ತ ಪಿಎಸ್‌ಐ ಹರೀಶ್ ಪದವಿನಂಗಡಿ

Update: 2025-04-02 18:43 IST
ಪೊಲೀಸರ ಕ್ಷೇಮಾಭಿವೃದ್ಧಿಗೆ ನಿಧಿ ಸಂಗ್ರಹ ಸೂಕ್ತವಲ್ಲ: ನಿವೃತ್ತ ಪಿಎಸ್‌ಐ ಹರೀಶ್ ಪದವಿನಂಗಡಿ
  • whatsapp icon

ಮಂಗಳೂರು, ಎ.2: ಪೊಲೀಸ್ ಧ್ವಜ ಮಾರಾಟ ಮಾಡಿ ಪೊಲೀಸರ ಕ್ಷೇಮಾಭಿವೃದ್ಧಿಗೆ ನಿಧಿ ಸಂಗ್ರಹ ಮಾಡುವುದು ಸೂಕ್ತವಲ್ಲ . ಹಳೆಯ ಈ ಪದ್ಧತಿಯಲ್ಲಿ ಬದಲಾವಣೆಯಾಗಲಿ ಎಂದು ಎಂದು ಸಿಸಿಬಿ ನಿವೃತ್ತ ಪಿಎಸ್‌ಐ ಹರೀಶ್ ಪದವಿನಂಗಡಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಮಂಗಳೂರು ನಗರ ಪೊಲೀಸ್, ಜಿಲ್ಲಾ ಪೊಲೀಸ್ ಮತ್ತು ಕೆಎಸ್‌ಆರ್‌ಪಿ 7ನೇ ಪಡೆ ಮಂಗಳೂರು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಡಿ.ಎ.ಆರ್. ಕವಾಯತು ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಚಾರ ನಿಯಮ ಉಲ್ಲಂಘನೆಗೆ ಪಡೆಯುವ ದಂಡದ ಮೊತ್ತದಿಂದ ಒಂದು ಭಾಗವನ್ನು ಪೊಲೀಸರ ಕ್ಷೇಮಾಭಿವೃದ್ಧಿಗೆ ಮೀಸಲಿಡಬೇಕಾಗಿದೆ ಎಂದು ಅವರು ನುಡಿದರು.

ನಿವೃತ್ತ ಪೊಲೀಸರಿಗೆ ಗ್ರೂಪ್ ಇನ್ಸೂರೆನ್ಸ್ ಸೌಲಭ್ಯ ಕಲ್ಪಿಸಿ, ಇದರ ಲಾಭವನ್ನು ಕುಟುಂಬದ ಸದಸ್ಯ ರಿಗೂ ದೊರಕುವಂತೆ ಮಾಡಬೇಕು. ಪ್ರತಿ ವರ್ಷ ನಿವೃತ್ತ ಪೊಲೀಸರಿಗೂ ಉಚಿತ ಆರೋಗ್ಯ ತಪಾಸಣೆ , ಆರೋಗ್ಯ ಯೋಜನೆಯ ಅನುಕೂಲ ಪಡೆಯಲು ಉತ್ತಮ ಮಟ್ಟದ ಆಸ್ಪತ್ರೆಯ ಸೌಲಭ್ಯ ಕಲ್ಪಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

*ನಿವೃತ್ತರಿಗೆ ರಾಷ್ಟ್ರೀಯ ಹಬ್ಬದಂದು ಸಮವಸ್ತ್ರ ಧರಿಸಲು ಅವಕಾಶ ಅಗತ್ಯ: ದೇಶ ಸೇವೆಯಲ್ಲಿರುವ ಸೈನಿಕರು ನಿವೃತ್ತರಾದ ಬಳಿಕ ರಾಷ್ಟ್ರೀಯ ಹಬ್ಬಗಳ ದಿನದಂದು ಅವರಿಗೆ ಸಮವಸ್ತ್ರದಲ್ಲಿ ಕಾರ್ಯಕ್ರಮಕ್ಕೆ ಬರಲು ಅವಕಾಶವಿದೆ. ಅದೇ ರೀತಿಯಲ್ಲಿ ಇಚ್ಛೆಯುಳ್ಳ ನಿವೃತ್ತ ಪೊಲೀಸರಿಗೂ ಸಮವಸ್ತ್ರ ಧರಿಸಿ ಬರಲು ಅವಕಾಶ ಕಲ್ಪಿಸಬೇಕು ಎಂದವರು ಸರಕಾರವನ್ನು ಒತ್ತಾಯಿಸಿದರು.

ನಿವೃತ್ತರಿಗೆ ಉತ್ತಮ ಬಟ್ಟೆ ಧರಿಸಲು, ವಿವಿಧ ಖಾದ್ಯಗಳನ್ನು ಸವಿಯಲು ವಹಿಸುವ ಆಸಕ್ತಿ ವ್ಯಾಯಾಮ ಮಾಡುವತ್ತ ಇಲ್ಲದೇ ಇರುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ನಿವೃತ್ತರಾದ ಮೇಲೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಕನಿಷ್ಠ 30ರಿಂದ 40 ನಿಮಿಷಗಳ ವ್ಯಾಯಾಮ ಮಾಡುವುದು ಅವಶ್ಯ ಎಂದು ಹರೀಶ್ ಪದವಿನಂಗಡಿ ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯೆಲ್ ಅಧ್ಯಕ್ಷತೆ ವಹಿಸಿದ್ದರು.

ಪೊಲೀಸರು ಸಮಾಜದ ಭದ್ರತೆ ಹಾಗೂ ಶಾಂತಿ ನಿರ್ಮಾಣಕ್ಕೆ ಕೆಲಸ ಮಾಡುತ್ತಾರೆ. ಪೊಲೀಸ್ ಧ್ವಜ ಮಾರಾಟದ ಶೇ.50ರಷ್ಟು ಹಣವನ್ನು ಕೇಂದ್ರ ನಿವೃತ್ತರ ಕ್ಷೇಮಾಭಿವೃದ್ಧಿಗೆ ಹಾಗೂ ಶೇ,50ರಷ್ಟು ಆಯಾ ಘಟಕದ ನಿವೃತ್ತರ ಕ್ಷೇಮಾಭಿವೃದ್ಧಿಗೆ ನಿನಿಯೋಗಿಸಲಾಗುತ್ತದೆ ಎಂದರು.

2024-25ನೇ ಸಾಲಿನಲ್ಲಿ ನಿವೃತ್ತರಾದ ಅಧಿಕಾರಿ/ಸಿಬ್ಬಂದಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಸಂಚಾರ ಹಾಗೂ ಅಪರಾಧ ವಿಭಾಗದ ಡಿಸಿಪಿ ರವಿಶಂಕರ್, ಪ್ರೊಬೆಷನರಿ ಎಸ್ಪಿ ಮನಿಷಾ ಉಪಸ್ಥಿತರಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್. ಸ್ವಾಗತಿಸಿದರು. ಸಿ.ಎ.ಆರ್. ಡಿಸಿಪಿ ಉಮೇಶ್ ವರದಿ ವಾಚಿಸಿದರು. ಕೆಎಸ್‌ಆರ್‌ಪಿ 7ನೇ ಪಡೆಯ ಕಮಾಂಡೆಂಟ್ ಎಸ್. ಸತ್ಯನಾರಾಯಣ ವಂದಿಸಿದರು. ವಿವೇಕ್, ಗಜೇಂದ್ರ, ತಿಲಕ್‌ರಾಜ್ ಕಾರ್ಯಕ್ರಮ ನಿರೂಪಿಸಿದರು.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News