ಇಲಿ ಪಾಷಾಣ ಸೇವಿಸಿ ತಾಯಿ, ಮಗ ಆತ್ಮಹತ್ಯೆಗೆ ಯತ್ನ; ಚಿಕಿತ್ಸೆ ಫಲಕಾರಿಯಾಗದೆ ಮಗ ಮೃತ್ಯು

ಸುಳ್ಯ: ಮೂರು ದಿನಗಳ ಹಿಂದೆ ಜೊತೆಯಾಗಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮತ್ತು ಮಗ ಚಿಕಿತ್ಸೆ ಫಲಕಾರಿಯಗದೆ ಮಗ ಮೃತಪಟ್ಟ ಘಟನೆ ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ ರವಿವಾರ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ನಾಲ್ಕೂರು ಗ್ರಾಮದ ನಡುಗಲ್ಲಿನ ದೇರಪ್ಪಜ್ಜನಮನೆ ನಿವಾಸಿ ಕುಶಾಲಪ್ಪ ಗೌಡ ಎಂಬವರ ಮಗ ನಿತಿನ್ (32) ಎಂದು ಗುರುತಿಸಲಾಗಿದೆ. ಇಬ್ಬರು ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿದ್ದಾರೆ ಎನ್ನಲಾಗಿದ್ದು ರವಿವಾರ ಮುಂಜಾನೆ ಇಬ್ಬರೂ ಅಸ್ವಸ್ಥಗೊಂಡಿರುವುದು ತಿಳಿದು ಬಂದಿದೆ.
ಈ ಪೈಕಿ ನಿತಿನ್ ಸ್ವಲ್ವ ಹೊತ್ತಿನಲ್ಲೇ ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಸುಲೋಚನಾರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ನಿತಿನ್ ಐಟಿಐ ವಿದ್ಯಾಭ್ಯಾಸ ಹೊಂದಿದ್ದು, ತಮ್ಮ ಜಮೀನಿನಲ್ಲಿ ಕೃಷಿಕರಾಗಿ ದುಡಿಯುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದು, ಪತ್ನಿ ಸ್ಥಳೀಯ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿ ಯಾಗಿದ್ದರು. ಪತ್ನಿ ತವರು ಮನೆಗೆ ಹೋಗಿದ್ದ ಸಂದರ್ಭ ತಾಯಿ ಸುಲೋಚನಾ ಹಾಗೂ ಮಗ ನಿತಿನ್ ವಿಷ ಸೇವಿಸಿದ್ದಾರೆ.
ಸ್ಥಳೀಯವಾಗಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದ ನಿತಿನ್ ಎಲ್ಲರೊಡನೇ ಆತ್ಮೀಯವಾಗಿದ್ದರು. ಏಕಾಏಕಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ದಿಗ್ಭ್ರಮೆ ವ್ಯಕ್ತವಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.