ಈಸ್ಟರ್, ಗುಡ್ ಫ್ರೈಡೇ, ಶುಭ ಗುರುವಾರ ಕ್ರೈಸ್ತ ಶಿಕ್ಷಕರಿಗೆ ಪರೀಕ್ಷೆ ಮೌಲ್ಯಮಾಪನಕ್ಕೆ ರಜೆ ನೀಡಲು ಆಗ್ರಹ

ಮಂಗಳೂರು, ಮಾ.6: ಕ್ರೈಸ್ತ ಸಮುದಾಯಕ್ಕೆ ಸೇರಿರುವ ಶಿಕ್ಷಕರಿಗೆ ಈಸ್ಟರ್ ಹಬ್ಬ, ಗುಡ್ ಫ್ರೈಡೆ, ಶುಭ ಗುರುವಾರ ಎಸ್‌ಎಸ್‌ಎಲ್‌ಸಿ ಮೌಲ್ಯ ಮಾಪನಕ್ಕೆ ರಜೆ ನೀಡುವಂತೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ನಿಯೋಗವು ದ.ಕ. ಜಿಲ್ಲಾ ಉಸ್ತುವಾರಿ ಸಚವರಿಗೆ ಮನವಿ ಸಲ್ಲಿಸಿದೆ.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಅಧ್ಯಕ್ಷ ಆಲ್ವಿನ್ ಡಿ ಸೋಜ ನೇತೃತ್ವದ ನಿಯೋಗವು ಸಚಿವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದೆ.
ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯವು ಈ ತಿಂಗಳನ್ನು ಪವಿತ್ರ ಮಾಸವೆಂದು ಪರಿಗಣಿಸಿ ಎರಡು ಸಾವಿರ ವರ್ಷಗಳ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುತ್ತಿವೆ. ಈ ತಿಂಗಳಲ್ಲಿ 40 ದಿವಸ ಉಪವಾಸವನ್ನು ನಡೆಸಿ ಚರ್ಚುಗಳಲ್ಲಿ ಪ್ರಾರ್ಥನೆ ಯನ್ನು ನಡೆಸುತ್ತಾ ಪಾಪ ಪರಿಹಾರಕ್ಕಾಗಿ ಪ್ರಾರ್ಥಿಸುವ ಸಂಪ್ರದಾಯ ವನ್ನು ಹಿಂದಿನಿಂದಲೂ ನಡೆದುಕೊಂಡು ಬರಲಾಗಿದೆ.
ಶುಕ್ರವಾರ ಗುಡ್ ಫ್ರೈಡೇ ಈ ದಿನ ಯೇಸು ಕ್ರಿಸ್ತರನ್ನು ಶಿಲುಬೆಗೆ ಏರಿಸಿದ ದಿನ ಗುರುವಾರವು ಶುಭ ಗುರುವಾರ ಹಾಗೇ ಆದಿತ್ಯವಾರದಂದು ಯೇಸು ಕ್ರಿಸ್ತರು ಪುನರ್ ಜನ್ಮವಾದ ದಿನವನ್ನು ನಾವು ಆಚರಿಸಿ ಕೊಂಡು ಬಂದಿರುತ್ತೇವೆ, ಈ ವರ್ಷ ಎಸೆಸೆಲ್ಸಿ ಪರೀಕ್ಷೆ ಮುಗಿದು, ಅದರ ಮೌಲ್ಯ ಮಾಪನವನ್ನು ಎ.15 ರಿಂದ ಹತ್ತು ದಿನಗಳ ಹಮ್ಮಿಕೊಂಡಿರುವುದು ಇಡೀ ಕ್ರೈಸ್ತ ಸಮುದಾಯಕ್ಕೆ ಬೇಸರ ತಂದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಕ್ರೈಸ್ತ ಶಿಕ್ಷಕರು ಇರುವುದರಿಂದಾಗಿ ಅವರಿಗೆ ಮೌಲ್ಯಮಾಪನಕ್ಕೆ ಹೋದರೆ ಈಸ್ಟರ್ ಹಬ್ಬ, ಗುಡ್ ಫ್ರೈಡೇ, ಶುಭ ಗುರುವಾರವನ್ನು ಆಚರಿಸಲು ಅಸಾಧ್ಯವಾಗಿದೆ ಎಂದು ನಿಯೋಗವು ಸಚಿವರಿಗೆ ತಿಳಿಸಿದೆ.
ಕ್ರೈಸ್ತ ಶಿಕ್ಷಕರಿಗೆ ರಜೆ ನೀಡಬೇಕೆಂದು ಕೇಳಿಕೊಂಡಾಗ ಅವರು ತಕ್ಷಣ ನಮ್ಮ ಮನವಿಗೆ ಸ್ಪಂದಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಮಾತನಾಡಿ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿ ಕೋಸ್ತಾ, ಫೆಜಾರ್ ವಲಯ ಅಧ್ಯಕ್ಷ ಸಂತೋಷ್ ಡಿ ಸೋಜ ಹಾಗೂ ಸಿಟಿ ವಲಯ ಅಧ್ಯಕ್ಷ ಅರುಣ್ ಡಿ ಸೋಜ, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಮೊಂತೆರೊ ಉಪಸ್ಥಿತರಿದ್ದರು.