ಕೊಂಕಣಿಯಲ್ಲಿ ಪಿಎಚ್‌ಡಿ ಪದವಿ ಪಡೆದ ಪ್ರೇಮ್ ಮೊರಾಸ್‌ಗೆ ಸನ್ಮಾನ

Update: 2025-04-02 18:35 IST
ಕೊಂಕಣಿಯಲ್ಲಿ ಪಿಎಚ್‌ಡಿ ಪದವಿ ಪಡೆದ ಪ್ರೇಮ್ ಮೊರಾಸ್‌ಗೆ ಸನ್ಮಾನ
  • whatsapp icon

ಮಂಗಳೂರು,ಎ .2: ಕೊಂಕಣಿ ಭಾಷೆಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದವರು ಮಾತನಾಡು ವುದರಿಂದ ಅದೊಂದು ವಿಶೇಷ ಮಾನ್ಯತೆ ಪಡೆದ ಭಾಷೆಯಾಗಿದೆ ಎಂದು ಕೊಂಕಣಿ ಭಾಷಾ ಮಂಡಳ ಕರ್ನಾಟಕದ ಕಾರ‌್ಯಕಾರಿ ಸದಸ್ಯ ಪ್ರಶಾಂತ್ ಶೇಟ್ ಹೇಳಿದ್ದಾರೆ.

ಮಂಗಳೂರಿನ ಶ್ರೀನಿವಾಸ್ ವಿವಿಯಿಂದ ಕೊಂಕಣಿಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಿಎಚ್‌ಡಿ ಪದವಿ ಪಡೆದ ಪ್ರೇಮ್ ಮೊರಾಸ್ ಅವರನ್ನು ನಗರದ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸನ್ಮಾನಿಸಿ ಮಾತನಾಡಿದರು.

ಕೊಂಕಣಿ ಭಾಷೆಗೆ ಸಂವಿಧಾನದ ಮಾನ್ಯತೆ ಬರಲು ಸಾಕಷ್ಟು ಮಂದಿ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಕೊಂಕಣಿ ಭಾಷಿಗರಲ್ಲಿ ಉದ್ಯಮಿಗಳು, ವೈದ್ಯರು, ಐಎಎಸ್ ಅಧಿಕಾರಿಗಳು ಸೇರಿದಂತೆ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಮಾತನಾಡುತ್ತಾರೆ. ಕೊಂಕಣಿ ಭಾಷೆ ಸಮೃದ್ಧವಾಗಿದೆ ಎಂದರು.

ಪ್ರೇಮ್ ಮೊರಾಸ್ ಮಾತನಾಡಿ,‘ಗೋವಾದಿಂದ ಮಂಗಳೂರಿಗೆ ವಲಸೆ ಬಂದ ಕೊಂಕಣಿಗರ ಒಂದು ಅಧ್ಯಯನ’ದಲ್ಲಿ ಡಾ.ಅರವಿಂದ್ ಶಾನುಭಾಗ್ ಅವರ ಮಾರ್ಗದರ್ಶನದಲ್ಲಿ ಕೊಂಕಣಿಯಲ್ಲಿ ಪಿಎಚ್‌ಡಿ ಮಾಡಿದ್ದೇನೆ.

ಕಳೆದ ನಾಲ್ಕು ವರ್ಷಗಳಿಂದ ಇದಕ್ಕಾಗಿ ಶ್ರಮಿಸಿದ್ದೇನೆ. ಕೊಂಕಣಿ ಭಾಷೆಗೊಂದು ಇದೊಂದು ವಿಶೇಷ ಕೊಡುಗೆಯಾಗಿದೆ. ಈ ಉದ್ದೇಶಕ್ಕಾಗಿ ಗೋವಾಕ್ಕೆ ಹೋಗಿ ಇತಿಹಾಸಕಾರನ್ನು ಭೇಟಿ ಮಾಡಲಾಗಿದೆ. ಸಂಶೋಧನೆಗೆ 100ಕ್ಕಿಂತ ಹೆಚ್ಚು ಪುಸ್ತಕ, ಕೃತಿಗಳನ್ನು , 70 ದಾಖಲೆಗಳನ್ನು ಅಧ್ಯಯನ ನಡೆಸಿ ಪ್ರಬಂಧವನ್ನು ಶ್ರೀನಿವಾಸ ವಿವಿಗೆ ಸಲ್ಲಿಸಿರುವುದಾಗಿ ತಿಳಿಸಿದರು.

ಶ್ರೀನಿವಾಸ ವಿವಿಯ ಸಂಸ್ಕೃತಿಗೆ ವಿಭಾಗದ ಮುಖ್ಯಸ್ಥ ಡಾ. ಅರವಿಂದ ಶಾನುಭಾಗ್ ಮಾರ್ಗದರ್ಶನದಲ್ಲಿ ನಾಲ್ವರಿಗೆ ಸಂಶೋಧನೆ ನಡೆಸುವ ಅವಕಾಶ ಸಿಕ್ಕಿತ್ತು. ಇದರಲ್ಲಿ ನನಗೆ ಮೊದಲು ಪಿಎಚ್‌ಡಿ ದೊರೆತಿದೆ. ಇನ್ನೂ ಒಂದು ವರ್ಷದಲ್ಲಿ ಉಳಿದ ಮೂವರಿಗೂ ಡಾಕ್ಟರೇಟ್ ಸಿಗಲಿದೆ ಎಂದರು.

ಈ ಸಂದರ್ಭ ಕೊಂಕಣಿ ಭಾಷಾ ಮಂಡಳ ಕರ್ನಾಟಕದ ಅಧ್ಯಕ್ಷ ಕೆ.ವಸಂತ ರಾವ್, ಕಾರ‌್ಯದರ್ಶಿ ರೇಮಂಡ್ ಡಿ ಕುನ್ಹಾ, ಸಹ ಕಾರ‌್ಯದರ್ಶಿ ಹಾಗೂ ಮೊರಾಸ್ ಅವರ ತಾಯಿ ಜೂಲಿಯೆಟ್ ಮೊರಾಸ್ ಮತ್ತು ಡಾ.ಅರವಿಂದ್ ಶಾನುಭಾಗ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News