ಮಂಗಳೂರು: ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Update: 2025-04-02 19:54 IST
ಮಂಗಳೂರು: ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ
  • whatsapp icon

ಮಂಗಳೂರು, ಎ.2: ಮಸೀದಿ, ಮದ್ರಸ, ಖಬರಸ್ತಾನ ದೋಚಲು ಬಿಡದಿರೋಣ ಎಂಬ ಘೋಷಣೆ ಯೊಂದಿಗೆ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಮತ್ತು ಮಸೂದೆಯ ಪ್ರತಿ ಹರಿದು ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ಆಸ್ತಿಯ ಒಂದಿಂಚನ್ನೂ ಬಿಟ್ಟುಕೊಡು ವುದಿಲ್ಲ, ವಕ್ಫ್ ಆಸ್ತಿಯನ್ನು ತಿಂದು ಹಾಕಲು ಬಿಡುವುದಿಲ್ಲ ಎಂದು ಘೋಷಿಸಿದರಲ್ಲದೆ, ಹಲಾಲ್ ಆಹಾರ ಆಗದ ನಿಮಗೆ ಹಲಾಲ್ ಆಸ್ತಿ ಆಗುವುದೇ ಎಂದು ಪ್ರಶ್ನಿಸಿದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ ದೇಶದ ಪ್ರತಿಯೊಂದು ಸನ್ಮಸ್ಸು ಗಳು ಕೂಡ ಈ ಮಸೂದೆಯನ್ನು ವಿರೋಧಿಸುತ್ತದೆ. ಹಾಗಾಗಿ ಮಸೂದೆಯನ್ನು ವಾಪಸ್ ಪಡೆಯುವ ವರೆಗೆ ನಾವು ಹೋರಾಟ ಮುಂದುವರಿಸಲಿದ್ದೇವೆ. ವಿಷಕಾರಿ ಚಿಂತನೆಯ ಈ ಮಸೂದೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಹಾಕಲಿದ್ದೇವೆ ಎಂದರು.

ಈ ಹೋರಾಟ, ಪ್ರತಿಭಟನೆಯ ಹಿಂದೆ ಎಸ್‌ಡಿಪಿಐಗೆ ಯಾವುದೇ ರಾಜಕೀಯ ಲಾಭದ ಉದ್ದೇಶವಿಲ್ಲ. ಮಸೂದೆ ಜಾರಿಯಾಗದಂತೆ ತಡೆಹಿಡಿಯುವುದೇ ನಮ್ಮ ಮುಖ್ಯ ಗುರಿಯಾಗಿದೆ. ಸಿಎಎ, ಎನ್‌ಆರ್‌ಸಿ ವಿರುದ್ಧ ಈ ಹಿಂದೆ ಮುಸ್ಲಿಂ ಸಮುದಾಯವು ಒಗ್ಗಟ್ಟಿನಿಂದ ಹೋರಾಟ ಮಾಡಿತ್ತು. ಅದೇ ಒಗ್ಗಟ್ಟಿನ ಪ್ರದರ್ಶನವು ಈ ಮಸೂದೆಯ ವಿರುದ್ಧವೂ ಆಗಬೇಕಿದೆ. ಅದಕ್ಕಾಗಿ ಸಮುದಾಯದ ಎಲ್ಲಾ ಉಲಮಾ-ಉಮರಾಗಳು, ಸಂಘಟನೆಗಳು ಮುಂದೆ ಬರಬೇಕಿದೆ ಎಂದು ರಿಯಾಝ್ ಕಡಂಬು ಹೇಳಿದರು.

ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿದರು. ಎಸ್‌ಡಿಪಿಐ ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ., ರಾಜ್ಯ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ, ಮಿಸ್ರಿಯಾ ಕಣ್ಣೂರು, ವಿಮ್ ಸಂಘಟನೆಯ ನಗರ ಅಧ್ಯಕ್ಷೆ ನಿಶಾ ವಾಮಂಜೂರು, ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ನೌರೀನ್ ಆಲಂಪಾಡಿ, ಜಿಲ್ಲಾ ನಾಯಕ ಅಶ್ರಫ್ ಅಡ್ಡೂರು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲಾ ನಾಯಕರಾದ ಜಮಾಲ್ ಜೋಕಟ್ಟೆ ಸ್ವಾಗತಿಸಿದರು. ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.












Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News