ಸುಳ್ಯದಲ್ಲಿ ರಾಷ್ಟ್ರೀಯ ಕಬಡ್ಡಿ ಪಂದ್ಯಾಟ: ಬ್ಯಾಂಕ್ ಆಫ್ ಬರೋಡಾ ಚಾಂಪಿಯನ್ - ಯೆನೆಪೋಯ ಯೂನಿವರ್ಸಿಟಿ ರನ್ನರ್ಸ್

Update: 2023-11-20 13:49 GMT

ಸುಳ್ಯದಲ್ಲಿ ಮೂರು ದಿನ ನಡೆದ ಪ್ರೊ ಮಾದರಿಯ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟದಲ್ಲಿ ಬ್ಯಾಂಕ್ ಆಫ್ ಬರೋಡಾ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಯೆನೆಪೋಯ ಯೂನಿವರ್ಸಿಟಿ ತಂಡ ದ್ವಿತೀಯ, ಆಳ್ವಾಸ್ ಮೂಡಬಿದ್ರೆ ತೃತೀಯ ಮತ್ತು ಟಿಎಂಸಿ ಥಾಣೆ ಚತುರ್ಥ ಬಹುಮಾನ ಪಡೆದುಕೊಂಡಿತು.

ಸೋಮವಾರ ಬೆಳಗ್ಗಿನ ಜಾವ ನಡೆದ ರೋಚಕ ಫೈನಲ್‍ನಲ್ಲಿ ಯೆನೆಪೋಯ ಯೂನಿವರ್ಸಿಟಿ ತಂಡವನ್ನು 31-26 ಅಂಕಗಳ ಅಂತರದಲ್ಲಿ ರೋಮಾಂಚನಕಾರಿಯಾಗಿ ಮಣಿಸಿ ಬ್ಯಾಂಕ್ ಆಫ್ ಬರೋಡಾ ಕಪ್ ಎತ್ತಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಫೈನಲ್ ಪಂದ್ಯದಲ್ಲಿ ಬಿಒಬಿ ಮತ್ತು ಯೆನೆಪೋಯ ಮಧ್ಯೆ ತೀವ್ರ ಪೈಪೋಟಿ ಕಂಡು ಬಂದಿತು ಇಡೀ ಪಂದ್ಯಾಟದಲ್ಲಿ ಸೋಲರಿಯದೆ ಅಜೇಯರಾಗಿ ಬ್ಯಾಂಕ್ ಆಫ್ ಬರೋಡ ತಂಡ ಚಾಂಪಿಯನ್ ಪಟ್ಟ ಅಂಕರಿಸಿತು. ಪ್ರೊ ಕಬಡ್ಡಿ ಆಟಗಾರರಾದ ಸುಕೇಶ್ ಹೆಗ್ಡೆ, ರತನ್, ರೋಹಿತ್ ಮಾರ್ಲ, ಸುನಿಲ್ ಹನುಮಂತಪ್ಪ, ವಿಶ್ವರಾಜ್ ಸೇರಿ ಖ್ಯಾತ ಆಟಗಾರರನ್ನು ಒಳಗೊಂಡ ಬ್ಯಾಂಕ್ ಆಫ್ ಬರೋಡ ಭರ್ಜರಿ ದಾಳಿ ಮತ್ತು ಹಿಡಿತಗಳ ಮೂಲಕ ನಿರಂತರ ಅಂಕಗಳನ್ನು ಏರಿಸುತ್ತಾ ಸಾಗಿತು. ಅರ್ಧಾವಧಿಯ ವೇಳೆಗೆ 23-19 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಮಾಜಿ ರಾಷ್ಟ್ರೀಯ ತಂಡದ ಆಟಗಾರ ಜಗದೀಶ್ ಕುಂಬ್ಲೆ ಅವರ ತರಬೇತಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶನ ನೀಡಿದ ಯೆನೆಪೋಯ ತಂಡ ಗಮನ ಸೆಳೆಯಿತು.

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್‍ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ಪಂದ್ಯಾಟ ಆಯೋಜಿಸಲಾಗಿತ್ತು.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News