ಎಮ್ಮೆಕೆರೆ ಕೊಳ ಅತಿಕ್ರಮಿಸಿ ಈಜುಕೊಳ ನಿರ್ಮಾಣ ಆರೋಪ: ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಎನ್‌ಇಸಿಎಫ್ ಒತ್ತಾಯ

Update: 2024-06-26 06:22 GMT

ಮಂಗಳೂರು, ಜೂ.26: ನಗರದ ತೋಟ ಗ್ರಾಮದ ಸರ್ವೆ ಸಂಖ್ಯೆ 108ರಲ್ಲಿ ಐತಿಹಾಸಿಕ ಎಮ್ಮೆಕೆರೆ ಹೊಂಡವನ್ನು ಅತಿಕ್ರಮಿಸಿ ಈಜುಕೊಳ ನಿರ್ಮಿಸಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್)ವು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಸ್ಮಾರ್ಟ್ ಸಿಟಿ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ದೂರು ಸಲ್ಲಿಸಿದೆ.

ಶತಮಾನಗಳಷ್ಟು ಹಳೆಯದಾದ ಎಮ್ಮೆಕೆರೆ ಹೊಂಡದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಿಂದ ಕಾಮಗಾರಿ ನಿರ್ಮಾಣವಾಗಿದ್ದು, ಕರ್ನಾಟಕ ಟ್ಯಾಂಕ್ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಕೆಟಿಸಿಡಿಎ) ಪೂರ್ವಾನುಮತಿ ಪಡೆಯದೆ ಅತಿಕ್ರಮಿಸಲಾಗಿದೆ. ಈಜುಕೊಳವನ್ನು 2023ರ ನವೆಂಬರ್ 24ರಂದು ಉದ್ಘಾಟಿಸಲಾಗಿದೆ. ಆರ್‌ಟಿಐಯಲ್ಲಿ ಪಡೆದ ಮಾಹಿತಿಯ ವೇಳೆ ಕೆಟಿಸಿಡಿಎಯಿಂದ ಈಜುಕೊಳ ನಿರ್ಮಾಣಕ್ಕೆ ಪೂರ್ವಾನುಮತಿ ಪಡೆಯದಿರುವುದು ಗಮನಕ್ಕೆ ಬಂದಿದೆ. ಇದು ನಿಯಂತ್ರಕ ಮಾನದಂಡಗಳ ಉಲ್ಲಂಘನೆಯಾಗಿದ್ದು, ಇದರಿಂದ ಪರಿಸರ ಅಸಮತೋಲನ ಮತ್ತು ಪ್ರದೇಶದ ಜಲ ಸಂಪನ್ಮೂಲಗಳಿಗೆ ಧಕ್ಕೆಯಾಗಲಿದೆ. ಈ ಬಗ್ಗೆ ಸ್ವತಂತ್ರ ಏಜೆನ್ಸಿಯಿಂದ ತನಿಖೆಗೆ ಕ್ರಮ ವಹಿಸಬೇಕು. ಅಕ್ರಮ ಒತ್ತುವರಿಯನ್ನು ತೆಗೆದು ಕೊಳವನ್ನು ಪುನಃಸ್ಥಾಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಖಾತರಿಪಡಿಸಬೇಕು. ಅಧಿಕಾರಿಗಳ ಅಧಿಕಾರ ದುರುಪಯೋಗ, ಉದ್ದೇಶಪೂರ್ವಕವಾಗಿ ಎಮ್ಮೆಕೆರೆ ಒತ್ತುವರಿ, ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಕ್ಕಾಗಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಬೇಕು. ಭವಿಷ್ಯದಲ್ಲಿ ಇಂತಹ ಅಕ್ರಮಗಳನ್ನು ತಡೆಯಲು ಈ ಈಜುಕೊಳ ನಿರ್ಮಾಣಕ್ಕೆ ಕಾರಣಕರ್ತರಾದ ಅಧಿಕಾರಿಗಳ ವೇತನವನ್ನು ಕೊಳದ ಮರುಸ್ಥಾಪನೆಗೆ ಬಳಕೆ ಮಾಡುವುದನ್ನು ಖಚಿಪಡಿಸುವ ಅಗತ್ಯವೂ ಇದೆ ಎಂದು ಎನ್‌ಇಸಿಎಫ್ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News