ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವಂಚನೆ ಆರೋಪ; ಕಾನೂನು ಕ್ರಮಕ್ಕೆ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಒತ್ತಾಯ

Update: 2024-11-16 07:35 GMT

ಮಂಗಳೂರು, ನ. 16: ಈಗಾಗಲೇ ಜಿಲ್ಲೆಯಲ್ಲಿ ನಿಷೇಧಿತ ‘ಮನ್ಸ’ ಹೆಸರು ರಾಜ್ಯ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇಲ್ಲ. ಆದರೆ ತಮ್ಮನ್ನು ಈ ಜಾತಿಯವರೆಂದು ಕರೆಸಿಕೊಳ್ಳುವ ತುಲುನಾಡ್ ಮನ್ಸ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಈಗಾಗಲೇ ಪರಿಶಿಷ್ಟ ಜಾತಿ ಸರ್ಟಿಫಿಕೇಟ್ ಪಡೆದು ಸರಕಾರ ಮತ್ತು ಸಮಾಜಕ್ಕೆ ವಂಚಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನುಕ್ರಮ ವಹಿಸಬೇಕು ಎಂದು ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಒತ್ತಾಯಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಸೇವಾ ಸಂಘದ ವತಿಯಿಂದ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅನಿಲ್ ಕುಮಾರ್ ಕಂಕನಾಡಿ ಮಾತನಾಡಿ, ಈ ಸಂಘದ ಪದಾಧಿಕಾರಿಗಳು ತಾವು ಹೇಳುತ್ತಿರುವ ನಿಷೇಧಿತ ಪದದ ಜಾತಿಯನ್ನು ಇನ್ನೂ ಸರಕಾರ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಿಲ್ಲ ಎಂಬುದನ್ನು ತಿಳಿದಿದ್ದರೂ ದುರುದ್ದೇಶರ್ಪೂಕವಾಗಿ ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು, ಸವಲತ್ತುಗಳನು ಪಡೆದು ಮೀಸಲಾತಿ ನೀತಿಯನ್ನು ಅಣಕ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂಘದ ವ್ಯಕ್ತಿಗಳು ಮತ್ತು ಅವರ ಮಕ್ಕಳು ಆದಿ ದ್ರಾವಿಡ, ಹೊಲೆಯ ಅಥವಾ ಇತರ ಯಾವುದೇ ಹೆಸರಿನಲ್ಲಿ ಪಡೆದಿರಬಹುದಾದ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ರದ್ದುಪಡಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಪರಿಶಿಷ್ಟ ಜಾತಿಯ ಹೆಸರಿನಲ್ಲಿ ಪಡೆದ ಉದ್ಯೋಗ, ಜಮೀನು, ಇತರ ವಿಶೇಷ ಸೌಲಭ್ಯವನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು ಈ ರೀತಿ ಮುಂದೆ ಯಾರೂ ವಂಚನೆ ಮಾಡದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಪಟ್ಟವರಿಗೆ ದೂರು ನೀಡುತ್ತಿರುವುದಾಗಿ ಅವರು ಹೇಳಿದರು.

ರಾಜ್ಯದ ಅವಿಭಜಿತ ದ.ಕ. ಜಿಲ್ಲೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರುಸೇರಿದಂತೆ ಆದಿ ದ್ರಾವಿಡ ಸಮಾಜದ ಸುಮಾರು ಆರು ಲಕ್ಷ ಜನರಿದ್ದು, ಈ ಸಮುದಾಯವನ್ನು ಒಡೆಯುವ ಹಾಗೂ ಸಮಾಜವನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇತ್ತೀಚೆಗೆ ತುಳುನಾಡ್ ಮನ್ಸ ಸೇವಾ ಸೇವಾ ಸಂಘ ಪತ್ರಿಕಾಗೋಷ್ಟಿ ನಡೆಸಿ ತಾವು ಮನ್ಸ ಜಾತಿಗೆ ಸೇರಿದವರಾಗಿದ್ದು, ತಮ್ಮ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಿಲ್ಲವಾದ್ದರಿಂದ ತಾವು ಹಾಗೂ ಇತರರು ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರ ಪಡೆದಿರುವುದಾಗಿ ತಿಳಿಸಿದ್ದಾರೆ. ಆದರೆ ಇಂತಹ ಪ್ರಯೋಜನ ಪಡೆಯುವುದು ಶಿಕ್ಷಾರ್ಹ ಅಪರಾಧ. ಈ ಬಗ್ಗೆ ನಾವು ಕಾನೂನಾತ್ಮಕ ಹೋರಾಟಕ್ಕೂ ಸಿದ್ಧತೆ ನಡೆಸಿದ್ದೇವೆ ಎಂದು ಸತ್ಯಸಾರಮಣಿ ಮೂಲ ಕ್ಷೇತ್ರದ ಕಾರ್ಯದರ್ಶಿ ಗಣೇಶ್ ಪ್ರಸಾದ್ ತಿಳಿಸಿದರು.

ತಮ್ಮ ಯಾವುದೇ ಜಾತಿಗೆ ಸೇರಿಸಬೇಕೆಂಬ ಅವರ ಹೋರಾಟಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಈವರೆಗೆ ಆದಿ ದ್ರಾವಿಡ ಸಮಾಜದ ಹೆಸರಿನಲ್ಲಿ ಸೌಲಭ್ಯಗಳನ್ನು ಪಡೆದು ಇದೀಗ ತಾವು ಬೇರೆ ಜಾತಿ ಎಂದು ಹೇಳಿಕೊಳ್ಳುತ್ತಿರುವುದು ವಂಚನೆಯಾಗಿದೆ. ಒಳ ಮೀಸಲಾತಿ ಬಗ್ಗೆ ಆದಿ ದ್ರಾವಿಡ ಸಮಾಜದ ವಿರೋಧ ಎಂಬುದು ತಪ್ಪು ಮಾಹಿತಿ. ನಮ್ಮ ಬೆಂಬಲವಿದೆ. ಆದರೆ ಈಗಾಗಲೇ ಮಾಡಿರುವ ಆಯೋಗದ ವರದಿಯನ್ನು ಮರು ಪರಿಶೀಲಿಸಿ ತಪ್ಪುಗಳನ್ನು ಸರಿಪಡಿಸಿಕೊಂಡು ವೈಜ್ಞಾನಿಕವಾಗಿ ದತ್ತಾಂಶಗಳನ್ನು ಕ್ರೋಢೀಕರಿಸಬೇಕೆಂಬುದು ನಮ್ಮ ಆಗ್ರಹ ಎಂದವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್‌ಬಾಗ್, ಜಿಲ್ಲಾಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ರಮೇಶ್ ಉಳ್ಳಾಲ್, ಪ್ರೇಮನಾಥ್ ಮೊದಲಾದವರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News