ಮೂಡುಬಿದಿರೆ: 71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024ಕ್ಕೆ ಚಾಲನೆ
ಮೂಡುಬಿದಿರೆ: ಪ್ರಜಾಪ್ರಭುತ್ವದ ಸ್ಥಂಭಗಳಲ್ಲಿ ಒಂದಾದ ಸಹಕಾರ ಚಳವಳಿಯು ರಾಜಕೀಯದ ಸರಕಾರವಾಗಬಾರದು. ಅದು ಸಾಮುದಾಯಿಕ, ನಿಸ್ಪಕ್ಷಪಾತ, ನಿರ್ವಂಚನೆಯ, ಸ್ವಹಿತಾಸಕ್ತಿರಹಿತ, ಪಾರದರ್ಶಕತೆಯ ಮೌಲ್ಯಗಳಿಂದ ಕೂಡಿರಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಅವರು ಗುರುವಾರ ಸಂಜೆ 108 ವರ್ಷಗಳ ಇತಿಹಾಸವಿರುವ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ 71ನೇ ಸಹಕಾರ ಸಪ್ತಾಹ ಸಂಭ್ರಮ -2024 ಸಪ್ತ ಸಂಧ್ಯಾ- ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವನಾಗಿ ಭಾರೀ ವ್ಯವಹಾರ ಸಂಸ್ಥೆಗಳ ಲಾಭಾಂಶವನ್ನು ಗ್ರಾಮೀಣ ಭಾರತಕ್ಕೆ ಹಂಚುವ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿ.ಎಸ್. ಆರ್. ಫಂಡ್) ಪರಿಕಲ್ಪನೆಯನ್ನು ಜಾರಿಗೊಳಿಸಲು ಮೂಡುಬಿದಿರೆ ಸೊಸೈಟಿ ಬ್ಯಾಂಕಿನ ಸೇವಾ ಮನೋಭಾವ, ಮೂಡುಬಿದಿರೆಯ ತವರು ನೆಲ ನನಗೆ ಸ್ಫೂರ್ತಿಯಾಗಿತ್ತು. ಈ ಸೊಸೈಟಿ ನಾಡಿಗೆ ಮಾತ್ರವಲ್ಲ, ರಾಷ್ಟ್ರಕ್ಕೆ ಮಾದರಿಯಾಗಿ ಬೆಳೆದಿರುವ ಬಗ್ಗೆ ಅಭಿಮಾನವಿದೆ ಎಂದರು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ತಮ್ಮ ಆಶೀರ್ವಚನ ನೀಡಿ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ವಿವಿಧ ರೀತಿಯಿಂದ ತಮ್ಮ ಬದುಕು ಕಟ್ಟಿಕೊಂಡಿವೆ. ಅದರಂತೆ ಮನುಷ್ಯರು ಆರ್ಥಿಕವಾಗಿ ಬಲಗೊಳ್ಳಲು ಸಹಕಾರ ಕೇಂದ್ರಗಳು ಭರವಸೆಯ ನಿಜ ಕೇಂದ್ರಗಳಾಗಿದ್ದು ಇದರ ಸದುಪ ಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.
ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೊಸೈಟಿಯಲ್ಲಿ ಕಳೆದ 53 ವರ್ಷಗಳಿಂದ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮೊದಲಾದ ಪದವಿಗಳನ್ನು ನಿರ್ವಹಿಸಿ ಸೊಸೈಟಿ ಯನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದ ಎಂ. ಗಣೇಶ್ ನಾಯಕ್ ಅವರಿಗೆ "ಕಲ್ಪವೃಕ್ಷ" ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಇದೇ ಸಂದರ್ಭ ಆರ್ಥಿಕವಾಗಿ ಹಿಂದುಳಿದಿರುವ ನಾಲ್ಕು ದೇವಾಲಯಗಳಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾ ಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ., ಮಂಗಳೂರು ಡಿಆರ್ ಪಿ ಎಸ್ ನ ಡಾ. ರಮೇಶ್, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ಎಂಸಿಎಸ್ ಸೊಸೈಟಿಯ ವಿಶೇಷ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಚಂದ್ರಶೇಖರ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆರಾಲ್ಡ್ ತಾವ್ರೋ ಪ್ರಾರ್ಥಿಸಿದರು. ಉಪನ್ಯಾಸಕಿ ಚೇತನಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಜಯರಾಮ್ ಕೋಟ್ಯಾನ್ ವಂದಿಸಿದರು.