ಮಂಗಳೂರು| ʼಪಾರ್ಟ್ ಟೈಮ್ ಜಾಬ್ʼ ನೆಪದಲ್ಲಿ ವಂಚನೆ ಪ್ರಕರಣ: ಮೈಸೂರು, ಬೆಂಗಳೂರು ಮೂಲದ ಐವರು ಆರೋಪಿಗಳ ಬಂಧನ

Update: 2024-11-15 13:51 GMT

ಮಂಗಳೂರು, ನ.15: ಪಾರ್ಟ್ ಟೈಮ್ ಜಾಬ್ ನೆಪದಲ್ಲಿ ಸೈಬರ್ ಅಪರಾಧ ಎಸಗಿದ ಮೈಸೂರು ಮತ್ತು ಬೆಂಗಳೂರು ಮೂಲದ ಐವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸೈಯ್ಯದ್ ಮೆಹಮೂದ್, ಶುಯೇಬ್, ಮುಹಮ್ಮದ್ ಶಾರೀಕ್ ಅಹ್ಮದ್, ಮೊಹ್ಸೀನ್ ಅಹ್ಮದ್ ಖಾನ್, ಮುಹಮ್ಮದ್ ಅಜಂ ಎಂದು ಗುರುತಿಸಲಾಗಿದೆ.

ಜುಲೈ 21ರಂದು ಪಾರ್ಟ್‌ ಟೈಮ್ ಜಾಬ್‌ನ ಬಗ್ಗೆ ವ್ಯಕ್ತಿಯೊಬ್ಬರಿಗೆ ವಾಟ್ಸ್‌ಆ್ಯಪ್ ಮೆಸೇಜ್ ಬಂದಿತ್ತು. ಅದರಲ್ಲಿ ಟೆಲಿಗ್ರಾಮ್‌ ವೊಂದರ ಲಿಂಕ್ ಕಳುಹಿಸಿ ಓಪನ್ ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ ಬಳಿಕ ಒಂದೊಂದೇ ಟಾಸ್ಕ್ ಕೊಟ್ಟು ಲಿಂಕ್ ಕಳುಹಿಸಿ ಹೆಚ್ಚುವರಿ ಹಣ ನೀಡುವುದಾಗಿ ನಂಬಿಸಿ 28,18,065 ರೂ.ವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿ ದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಐಟಿ ಕಾಯ್ದೆಯಂತೆ ದೂರು ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಕೊಣಾಜೆ ಠಾಣೆಯ ಇನ್‌ಸ್ಪೆಕ್ಟರ್ ರಾಜೇಂದ್ರ ಬಿ. ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ಮೈಸೂರು ಜಿಲ್ಲೆಯ ಉದಯಗಿರಿ ಮೂಲದ ನಾಲ್ಕು ಆರೋಪಿಗಳು ಮತ್ತು ಬೆಂಗಳೂರು ನೀಲಸಂದ್ರ ಮೂಲದ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಶುಯೇಬ್ ಎಂಬಾತನಿಗೆ ದಸ್ತಗಿರ್ ಎಂಬಾತನ ಪರಿಚಯವಾಗಿದ್ದು, ಆತನು ಆರೋಪಿ ಶುಯೇಬ್‌ನಲ್ಲಿ ತನಗೆ ಬ್ಯಾಂಕ್ ಆಕೌಂಟ್ (ಪಾಸ್‌ಬುಕ್, ಚೆಕ್‌ಬುಕ್, ಎಟಿಎಮ್ ಕಾರ್ಡ್, ಅಕೌಂಟ್‌ಗೆ ಲಿಂಕ್ ಆಗಿರುವ ಸಿಮ್ ಕಾರ್ಡ್) ಮಾಡಿಸಿಕೊಡಬೇಕು ಒಂದು ಬ್ಯಾಂಕ್ ಆಕೌಂಟ್‌ಗೆ 10,000 ರೂ.ವನ್ನು ನೀಡುವುದಾಗಿ ತಿಳಿಸಿದ್ದ. ಅದರಂತೆ ಶುಯೇಬ್ ಮೈಸೂರು ರಾಜೇಂದ್ರ ನಗರ ಶಾಖೆಯ ಕರ್ನಾಟಕ ಬ್ಯಾಂಕ್ ಮತ್ತು ಎನ್‌ಆರ್ ಮೊಹಲ್ಲಾ ಶಾಖೆಯ ಕೆನರಾ ಬ್ಯಾಂಕ್ ಆಕೌಂಟ್‌ಗಳನ್ನು ದಸ್ತಗೀರ್‌ಗೆ ನೀಡಿ 20,000 ರೂ. ಪಡೆದಿದ್ದ. ಈ ಮಧ್ಯೆ ಶುಯೇಬ್‌ಗೆ ಏರ್‌ ಟೆಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸೈಯ್ಯದ್ ಮೆಹಮೂದ್ ಎಂಬಾತನ ಪರಿಚಯವಾಗಿ ಆತನಿಂದ ಸಿಮ್‌ಗಳನ್ನು ಖರೀದಿಸಿದ್ದ. ಶುಯೇಬ್‌ನ ಸೂಚನೆಯಂತೆ ಆತನು ಹೇಳಿದ ವ್ಯಕ್ತಿಗಳಿಗೆ ಸೈಯ್ಯದ್ ಮೆಹಮೂದ್ ಸಿಮ್‌ಗಳನ್ನು ಕೊಟ್ಟಿದ್ದ. ಹೀಗೆ ಆರೋಪಿಗಳು ಮೈಸೂರಿನ ನೆಹರೂನಗರ, ಶಾಂತಿನಗರ, ರಾಜೀವನಗರ, ಬೆಂಗಳೂರಿನ ನೀಲಸಂದ್ರ ಮತ್ತಿತರ ಹಲವಡೆ ಸೈಬರ್ ಮೋಸದ ಕೃತ್ಯಕ್ಕೆ ಹೆಚ್ಚಿನ ಜನರು ತಮ್ಮ ಬ್ಯಾಂಕ್‌ ಖಾತೆಗಳನ್ನು ಹಣಕ್ಕೆ ಮಾರಾಟ ಮಾಡಿರುವುದು ತನಿಖೆಯ ವೇಳೆ ಬಹಿರಂಗಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಕೊಣಾಜೆ ಠಾಣೆಯ ಎಸ್ಸೈಗಳಾದ ಪುನೀತ್ ಗಾಂವ್ಕರ್, ಅಶೋಕ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News