ಫಾದರ್ ಮುಲ್ಲರ್ ಸಂಸ್ಥೆಯಿಂದ 25 ವರ್ಷಗಳಲ್ಲಿ ಮಾನವೀಯ ಸೇವೆ: ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ
ಮಂಗಳೂರು: ಫಾದರ್ ಮುಲ್ಲರ್ ಸಂಸ್ಥೆ ಕಳೆದ 25 ವರ್ಷದಿಂದ ಉತ್ತಮ ಆರೋಗ್ಯ ಸೇವೆಯ ಜತೆಗೆ ಮಾನವೀಯತೆಯ ಸೇವೆಯನ್ನು ನೀಡುತ್ತಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು.
ನಗರದ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
25 ವರ್ಷದ ಹಿಂದೆ ಅಂದಿನ ಕೇಂದ್ರ ಸಚಿವ ಜಾರ್ಜ್ ಫೆನಾರ್ಂಡೀಸ್ ಉದ್ಘಾಟಿಸಿದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಇಂದು ವಿಶಾಲವಾಗಿ ಬೆಳೆದು ಸಮಾಜದ ಬಡವರ ಸೇವೆ ಮಾಡುತ್ತಿದೆ ಎಂದವರು ಹೇಳಿದರು.
ಕಳೆದ ಆರ್ಥಿಕ ವರ್ಷದಲ್ಲಿ ಮುಲ್ಲರ್ ಚಾರಿಟೇಬಲ್ ಸಂಸ್ಥೆಯು 106 ಕೋ.ರೂ ಮೊತ್ತದ ಆರೋಗ್ಯ ಸೇವೆಯನ್ನು ಬಡವ ರಿಗೆ ನೀಡಿದೆ. ಬಡವರಿಗೆ ಸೇವೆ ನಮ್ಮ ಧ್ಯೇಯ. ಆರಂಭದಲ್ಲಿ 100 ಮೆಡಿಕಲ್ ಸೀಟ್ ಲಭ್ಯವಿದ್ದ ಈ ಕಾಲೇಜಿನಲ್ಲಿ ಇಂದು 150 ಮೆಡಿಕಲ್ ಸೀಟ್ ಇದ್ದು, ಇದಕ್ಕೆ ಸಾವಿರಕ್ಕೂ ಅಧಿಕ ಅರ್ಜಿಗಳು ಬರುತ್ತದೆ ಎಂದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಸ್ಥಾಪನೆಯಾದಾಗ ಅನೇಕ ಸವಾಲುಗಳು ಎದುರಾಗಿತ್ತು. ಅವುಗಳನ್ನು ಮೆಟ್ಟಿನಿಂತು ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಲು ಸಾಧ್ಯವಾಗಿದೆ. ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕಿದ್ದು, ಅನೇಕರ ಪರಿಶ್ರಮದಿಂದ ಇದಕ್ಕೂ ಕಾಲ ಕೂಡಿಬರಲಿದೆ. ಕಳೆದ 25 ವರ್ಷಗಳಿಂದ ಸಂಸ್ಥೆ ಗುಣಮಟ್ಟದ ಸೇವೆ ನೀಡು ತ್ತಿದ್ದು ಜನರ ವಿಶ್ವಾಸಗಳಿಸಿದೆ ಎಂದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಇದರ 25 ವರ್ಷಗಳ ಶ್ರೇಷ್ಟತೆ ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಇತಿಹಾಸ, ಫಾದರ್ ಮುಲ್ಲರ್ ಅವರ ಸೇವಾಯೋಜನೆ, ಸಂಸ್ಥೆಯ ಉದ್ದೇಶ, ಸಮಾಜಸೇವೆ, ಬಡವರ ಸೇವೆಯ ಬಗ್ಗೆ ಬೆಳಕು ಚೆಲ್ಲುವ ‘ಟಾರ್ಚ್ ಬೈ ಏಂಜಲ್ಸ್’ ಎಂಬ ಕೃತಿ ಬಿಡುಗಡೆಗೊಳಿಸಲಾಯಿತು. ಫಾದರ್ ಮುಲ್ಲರ್ ಸಂಸ್ಥೆಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸಿದ ವೈದ್ಯರು ಹಾಗೂ ಇತರ ಸಿಬ್ಬಂದಿ ವರ್ಗದವರಿಗೆ ಸನ್ಮಾನ, ಸಂಸ್ಥೆಯಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಧರ್ಮಗುರುಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತಧಿಕಾರಿ ಫಾ. ಜೀವನ್ ಜಾರ್ಜ್ ಸಿಕ್ವೇರಾ, ಸಹಾಯಕ ಆಡಳಿತಧಿಕಾರ ಫಾ. ನಿಲೇಶ್ ಕ್ರಾಸ್ತಾ, ವೈದ್ಯಕೀಯ ಅಧೀಕ್ಷಕ ಡಾ. ಉದಯ ಕುಮಾರ್ ಕೆ, ಡೀನ್ ಡಾ. ಆ್ಯಂಟನಿ ಸಿಲ್ವನ್, ಸಹಾಯಕ ಡೀನ್ ಡಾ. ವೆಂಕಟೇಶ್ ಉಪಸ್ಥಿತರಿದ್ದರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ರೆ. ಫಾ. ರಿಚರ್ಡ್ ಕುವೆಲ್ಲೋ ಸ್ವಾಗತಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ರೆ.ಫಾ. ಅಜಿತ್ ಮಿನೇಜಸ್ ವಂದಿಸಿದರು.