ಮಂಗಳೂರಿನಲ್ಲೂ ‘ಫುಡ್ ಆನ್ ವ್ಹೀಲ್’ ಕಾರ್ಯಾರಂಭ
ಮಂಗಳೂರು, ನ. 15: ಯುನಿವರ್ಸಲ್ ನಾಲೇಜ್ ಮತ್ತು ಗ್ರಾಮ ವಿಕಾಸ್ ಟ್ರಸ್ಟ್ ಆಶ್ರಯದಲ್ಲಿ ಮಂಗಳೂರಿನಲ್ಲಿಯೂ ‘ಫುಡ್ ಆನ್ ವ್ಹೀಲ್’ ಕಾರ್ಯಕ್ರಮ ಆರಂಭಿಸಲಾಗಿದ್ದು, ಉಚಿತ ಊಟದ ವಾಹನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಈ ವಾಹನ ಪ್ರತಿನಿತ್ಯ ನಗರದ ವಿವಿಧ ಭಾಗಗಳಲ್ಲಿ ಹಸಿದವರಿಗೆ ಊಟವನ್ನು ವಿತರಿಸಲಿದೆ. ಪ್ರತಿದಿನ ಮಧ್ಯಾಹ್ನ 12.30ರಿಂದ 2 ಗಂಟೆಯವರೆಗೆ ಧಕ್ಕೆ, ಸೆಂಟ್ರಲ್ ಮಾರ್ಕೆಟ್, ಬಸ್ ನಿಲ್ದಾಣ, ಆಸ್ಪತ್ರೆ ಸೇರಿದಂತೆ ದಿನಕ್ಕೊಂದು ಕಡೆ ಈ ವಾಹನ ಸಂಚರಿಸಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ವಾಹನಕ್ಕೆ ಹಸಿರು ನಿಶಾನೆ ನೀಡುವ ಕಾರ್ಯಕ್ರಮದಲ್ಲಿ ಗಣೇಶ್ ಪ್ರಸಾದ್, ಮಾಧವ ಭಂಡಾರಿ, ಮೋಹಿನಿ ಶಿರಿ, ದಿನಕರ ಶೆಟ್ಟಿ, ಶಶಿಧರ್ ಶೆಟ್ಟಿ, ಸ್ವಪ್ನ, ನರೇಶ್, ಸ್ವರ್ಣ ಹಾಗೂ ಅಶೋಕ್ ಉಪಸ್ಥಿತರಿದ್ದರು.
ಯುನಿವರ್ಸಲ್ ನಾಲೇಜ್ ಮಂಗಳೂರು ಜನರಿಗೆ ಮಾರ್ಗದರ್ಶನ ನೀಡುವ ಆಧ್ಯಾತ್ಮಿಕ ಸಂಸ್ಥೆಯಾಗಿದ್ದು, ಕಳೆದ ಒಂದು ದಶಕದಿಂದ ಪರಿಸರ ಸ್ವಚ್ಛತೆ, ಹಸಿರು ವನ ನಿರ್ಮಾಣ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದೆ. ಗ್ರಾಮ ವಿಕಾಸ ಸೊಸೈಟಿಯ ಸಹಯೋಗದಲ್ಲಿ ರೋಹನ್ ಸಿರಿ ಹಾಗೂ ಶಮ್ಮಿ ಸಿರಿಯವರ ಮಾರ್ಗದರ್ಶನದಲ್ಲಿ ರಾಜ್ಯದ 1.3 ಲಕ್ಷ ವಿದ್ಯಾರ್ಥಿಗಳಿಗೆ ಮತ್ತು ಖಾಸಗಿ ಮತ್ತು ಸರಕಾರಿ ಶಿಕ್ಷಕರಿಗೆ ಉಚಿತವಾಗಿ ಆಂತರಿಕ ಅಭಿವೃದ್ಧಿ ಶಿಕ್ಷಣ ಮತ್ತು ತರಬೇತಿ ಕಾರ್ಯಾಗಾರವನ್ನು ನಡೆಸುತ್ತಿದೆ.
ಈಗಾಗಲೇ ರಾಜ್ಯದ 12 ಹೊಟೇಲ್‌ಗಳಲ್ಲಿ ಉಚಿತ ಊಟದ ವ್ಯವಸ್ಥೆ ಫುಡ್ ಆನ್ ವೀಲ್ ಮೂಲಕ ಸುಮಾರು 40 ಸಾವಿರ ಊಟವನ್ನು ವಿತರಿಸಲಾಗಿದ್ದು, ಧಾರವಾಡದಲ್ಲಿ ಈಗಾಗಲೇ ಪ್ರತಿನಿತ್ಯ ಉಚಿತ ಊಟವನ್ನು ಅಗತ್ಯ ಇರುವವರಿಗೆ ಹಂಚುವ ವ್ಯವಸ್ಥೆ ನಡೆಯುತ್ತಿದೆ.
ಮಂಗಳೂರಿನಲ್ಲಿಯೂ ಇದೀಗ ಆರಂಭಗೊಂಡಿರುವ ಫುಡ್ ಆನ್ ವೀಲ್‌ನ ಸೇವೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಚಿಲಿಂಬಿಯ ಕೃಷ್ಣ ಟವರ್‌ನಲ್ಲಿರುವ ಯುನಿವರ್ಸಲ್ ನಾಲೇಜ್ ಕಚೇರಿಯನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.