ರಾಜಕೀಯ ದುರುದ್ದೇಶದಿಂದ ಎಬಿವಿಪಿಯಿಂದ ಮಂಗಳೂರು ವಿವಿಗೆ ನುಗ್ಗಿ ಗೂಂಡಾಗಿರಿ: ಎನ್ಸೆಸ್ ಯುಐ ಆರೋಪ
ಮಂಗಳೂರು: ಅಂಕಪಟ್ಟಿ ಸಮಸ್ಯೆಯ ಪರಿಹರಿಸುವಂತೆ ಒತ್ತಾಯಿಸಿ ಧರಣಿಯ ನೆಪದಲ್ಲಿ ಎಬಿವಿಪಿ ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧಕ್ಕೆ ಮುತ್ತಿಗೆ ಗೂಂಡಾಗಿರಿ ನಡೆಸಿದೆ. ಆಡಳಿತಸೌಧದ ಬಾಗಿಲಿನ ಗಾಜಿಗೆ ಹಾನಿ ಮಾಡಿದೆ. ಇದು ಖಂಡನೀಯ ಎಂದು ಎನ್ ಎಸ್ ಯು ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹೇಳಿದೆ.
ತಪ್ಪಿತಸ್ಥ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಎನ್ನೆಸ್ ಯುಐ ದ.ಕ. ಜಿಲ್ಲಾ ಅಧ್ಯಕ್ಷ ಸುಹಾನ್ ಆಳ್ವ ಒತ್ತಾಯಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಅಂಕಪಟ್ಟಿ ಸಮಸ್ಯೆಗೆ ಸಂಬಂಧಿಸಿ ಎನ್ ಎಸ್ ಯು ಐ ದ.ಕ. ಜಿಲ್ಲಾ ಉಳ್ಳಾಲ ತಾಲೂಕು ಸಮಿತಿಯು ಕಳೆದ ತಿಂಗಳು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿತ್ತು, ಸ್ಪೀಕರ್ ಯು.ಟಿ ಖಾದರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರವೇ ಪರಿಹರಿಸುವ ಭರವಸೆ ನೀಡಿದ್ದಾರೆ
ಆದರೆ ಇದೀಗ ಎಬಿವಿಪಿ ಕಾರ್ಯಕರ್ತರು ರಾಜಕೀಯ ಲಾಭಕ್ಕೋಸ್ಕರ ವಿಶ್ವವಿದ್ಯಾನಿಲಯದ ಆಡಳಿತ ಕಚೇರಿಗೆ ನುಗ್ಗಿ ಹಾನಿ ಮಾಡಿದಲ್ಲದೆ, ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ದೇವಾಲಯದಂತೆ ಕಾಣುವ ಸಮಾಜದಲ್ಲಿ ಎಬಿವಿಪಿ ಕಾರ್ಯಕರ್ತರ ಈ ವರ್ತನೆ ಅವರ ನೈಜ ಮುಖವಾಡವನ್ನು ತೋರಿಸುತ್ತಿದೆ. ಪೊಲೀಸ್ ಇಲಾಖೆಯು ಗೂಂಡಾಗಿರಿ ನಡೆಸಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.