ಏಕರೂಪದ ಕಮಿಷನ್ ದರಕ್ಕೆ ಪಡಿತರ ವಿತರಕರ ಸಂಘ ಒತ್ತಾಯ

Update: 2024-11-15 09:01 GMT

ಮಂಗಳೂರು, ನ.15: ಕೇಂದ್ರ ಸರಕಾರವು ಆಹಾರ ಭದ್ರತಾ ಕಾಯ್ದೆಯಡಿ 84 ಕೋಟಿ ಪಡಿತರ ಚೀಟಿದಾರರಿಗೆ ಉಚಿತವಾದ ಆಹಾರ ಧಾನ್ಯ ನೀಡುತ್ತಿದೆ. ಪ್ರಸ್ತುತ ವಿವಿಧ ರಾಜ್ಯಗಳಲ್ಲಿ ನೀಡಲಾಗುವ ಕಮೀಷನ್ ದರವನ್ನು ಏಕರೂಪ ಮಾಡಬೇಕು. ಈ ಮೂಲಕ ನ್ಯಾಯಬೆಲೆ ಅಂಗಡಿ ಮಾಲಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಆಗ್ರಹಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕರೂಪ ಕಮೀಷನ್ ಯೋಜನೆಯನ್ನು ಜಾರಿಗೆ ತಂದು ನ್ಯಾಯಬೆಲೆ ಅಂಗಡಿ ಮಾಲಕರಿಗೆ ಪ್ರತಿ ಕ್ವಿಂಟಾಲ್‌ಗೆ 250 ರೂ. ಕಮೀಷನ್ ಹಣವನ್ನು ಕೊಡಬೇಕು. ಪ್ರಸ್ತುತ ಹಣದುಬ್ಬರದಿಂದ ಸಾರ್ವಜನಿಕರಿಗೆ ದಿನನಿತ್ಯ ಬಳಕೆಯ ವಸ್ತುಗಳನ್ನು ಖರೀದಿಸಲು ತುಂಬಾ ಕಷ್ಟವಾಗುತ್ತಿದೆ. ಕೇಂದ್ರ ಸರಕಾರದ ಯೋಜನೆಗಳಾದ ಭಾರತ್ ರೈಸ್, ಭಾರತ್ ಬೇಳೆ, ಭಾರತ್ ಚನ್ನ (ಕಡ್ಲೆಕಾಳು) ಯೋಜನೆಯನ್ನು ಜಾರಿಗೆ ತಂದಿರುವುದು ಸಂತೋಷದ ವಿಚಾರ. ಈ ದಿನನಿತ್ಯದ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡಿದರೆ ದರದಲ್ಲಿನ ಏರಿಳಿತವನ್ನು ತಡೆಗಟ್ಟಬಹುದು ಎಂದರು.

ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಕಡಿಮೆ ದರದಲ್ಲಿ ಸುಲಭವಾಗಿ ಸಿಗುವಂತೆ ಮಾಡಿ ಹಣದ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟಬಹುದು. ಅತೀ ಹೆಚ್ಚು ದರ ಬರುವ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ಸುಲಭವಾಗಿ ಸಾರ್ವಜನಿಕರಿಗೆ ತಲುಪಿಸಬಹುದು. ಕೇಂದ್ರ ಸರಕಾರ ಈ ಯೋಜನೆಯನ್ನು ತತ್‌ಕ್ಷಣ ಜಾರಿಗೊಳಿಸಬೇಕು ಎಂದು ವಿವರಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಭಾಸ್ಕರ್ ಸಾಲ್ಯಾನ್, ದೇವರಾಜು, ಫೈರೋಜ್, ಚನ್ನಕೇಶವೇಗೌಡ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News