ಉಪ್ಪಿನಂಗಡಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹೆದ್ದಾರಿ ತಡೆ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ಮೇಲೆ ಪ್ರಕರಣ ದಾಖಲು

Update: 2024-11-16 07:28 GMT

ಉಪ್ಪಿನಂಗಡಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧದ ನೆಪದಲ್ಲಿ ಅನುಮತಿ ಪಡೆಯದೆ ರಾಷ್ಟ್ರೀಯ ಹೆದ್ದಾರಿಗೆ ತಡೆಯೊಡ್ಡಿ ವಾಹನ ಸಂಚಾರಕ್ಕೆ ಅಡತಡೆಯನ್ನುಂಟು ಮಾಡಿದ ಆರೋಪದಲ್ಲಿ ಸುಳ್ಯ , ಬೈಂದೂರು ಶಾಸಕರನ್ನೂ ಒಳಗೊಂಡಂತೆ ಹದಿನೈದಕ್ಕೂ ಅಧಿಕ ಮಂದಿಯ ವಿರುದ್ದ ಭಾರತೀಯ ನ್ಯಾಯ ಸಂಹಿತೆ ಕಲಂ: 189(2)126(2),285, ಜೊತೆಗೆ 190 ಅನುಸಾರ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನ.15 ಗುರುವಾರ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಮಾಡ ಮೈದಾನದಲ್ಲಿ ಮಲೆನಾಡ ಜನಹಿತ ರಕ್ಷಣಾ ವೇದಿಕೆ ಇದರ ವತಿಯಿಂದ ಇದರ ಸಂಚಾಲಕ ಕಿಶೋರ್ ಶಿರಾಡಿ ಎಂಬವರ ನೇತ್ರತ್ವದಲ್ಲಿ ಪ್ರತಿಭಟನಾ ಸಭೆ ನಡೆದಿದೆ.

ಪ್ರತಿಭಟನಾ ಸಭಾ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕ ಅವಿನಾಶ್ ಹೆಚ್.ರವರು ಹಾಗೂ ಇತರ ಸಿಬ್ಬಂದಿಯವರು ಕರ್ತವ್ಯದಲ್ಲಿದ್ದರು. ಈ ಸಂದರ್ಭ ಪ್ರತಿಭಟನಾ ಸಭೆಯಲ್ಲಿದ್ದವರು ಮಧ್ಯಾಹ್ನದ ಊಟದ ನಂತರ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯರವರ ನೇತೃತ್ವದಲ್ಲಿ ಪ್ರತಿಭಟನಾ ಸಭೆಯ ಸ್ಥಳದಿಂದ ಸುಮಾರು 1 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ 75 ನೇ ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯಪೇಟೆಗೆ ಬಂದು ಮಧ್ಯಾಹ್ನ 2.30 ಗಂಟೆಗೆ ರಸ್ತೆ ತಡೆಯನ್ನು ಪ್ರಾರಂಭಿಸಿದ್ದರು.

ರಸ್ತೆಯ ಮಧ್ಯದಲ್ಲಿಯೇ ಭಾಗೀರಥಿ ಮುರುಳ್ಯ, ಸುಧೀರ್ ಶೆಟ್ಟಿ, ಕಿಶೋರ್ ಶಿರಾಡಿ, ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳಿ, ನವೀನ್ ನೆರಿಯಾ, ಸತೀಶ್ ಶೆಟ್ಟಿ ಬಲ್ಯ, ಉಮೇಶ್ ಸಾಯಿರಾಮ್, ವೆಂಕಟ ಒಳಲಂಬೆ, ಪ್ರಕಾಶ್ ಗುಂಡ್ಯ, ಪ್ರಸಾದ್ ನೆಟ್ಟಣ, ಸೈಯದ್ ಮೀರಾನ್ ಸಾಹೇಬ್, ಉಮೇಶ್ ಬಲ್ಯ, ನವೀನ್ ರೆಖ್ಯಾ, ಯತೀಶ್ ಗುಂಡ್ಯ, ಗಣೇಶ್ ಮತ್ತು ಇತರರು ಅಕ್ರಮಕೂಟ ಸೇರಿಕೊಂಡು ಅಕ್ರಮ ರಸ್ತೆ ತಡೆಮಾಡಿ ಪ್ರತಿಭಟನೆಯನ್ನು ಮಾಡಿದ್ದಾರೆ. ರಸ್ತೆಯನ್ನು ಅಕ್ರಮ ತಡೆಮಾಡಿದ್ದಲ್ಲಿ ಸಾರ್ವಜನಿಕ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿವುಂಟಾಗುವುದಾಗಿ ತಿಳಿಹೇಳಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಪ್ರತಿಭಟನೆ ಮಾಡದೇ ತೆರವುಗೊಳಿಸಿ ಸಾರ್ವಜನಿಕ ರಸ್ತೆಗೆ ಅಡ್ಡಿಪಡಿಸದಂತೆ ತಿಳಿಸಿದರೂ  ಪ್ರತಿಭಟನೆಯನ್ನು ಮುಂದುವರಿಸಿದ ಪ್ರತಿಭಟನಾಕಾರರು  ಕಸ್ತೂರಿರಂಗನ್ ಜಾರಿ ವಿರೋಧಿಸಿ ಸರಕಾರದ ವಿರುದ್ಧ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ದ ಘೋಷಣೆಯನ್ನು ಕೂಗುತ್ತಿದ್ದರು. ಈ ರೀತಿ ಅಕ್ರಮ ಕೂಟ ಸೇರಿಕೊಂಡು ಅಕ್ರಮ ಹೆದ್ದಾರಿ ತಡೆ ಮಾಡಿ ಸಾರ್ಜಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಕಾನೂನು ಬಾಹಿರ ಎಂಬುದಾಗಿ ತಿಳಿಸಿದರೂ, ಇದನ್ನು ಗಣನೆಗೆ ತೆಗೆದುಕೊಳ್ಳದೆ ಮಧ್ಯಾಹ್ನ 3.30 ಗಂಟೆಯ ವರೆಗೆ ಅಕ್ರಮ ಹೆದ್ದಾರಿ ತಡೆಮಾಡಿ ಸಾರ್ಜಜನಿಕ ಮತ್ತು ವಾಹನ ಸಂಚಾರಕ್ಕೆ ಅಡಚಣೆವುಂಟು ಮಾಡಿದ್ದಾರೆ.

ಈ ಬಗ್ಗೆ ಈ ಬಗ್ಗೆ ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಅವಿನಾಶ್ ಎಚ್. ಅವರು ನೀಡಿದ ವರದಿಯಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News