ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ಸಮಸ್ಯೆ ಬಗೆಹರಿಸಿ: ದ.ಕ. ಜಿಲ್ಲಾಧಿಕಾರಿ

Update: 2024-02-13 15:54 GMT

ಮಂಗಳೂರು: ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಕಾರ್ಡ್‌ಗಳಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂಗವಿಕಲರ ಕುಂದು ಕೊರತೆಗಳ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಕಾರ್ಡ್ಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಗೆ ಕಾರಣಗಳನ್ನು ಹುಡುಕಿ ಆದಷ್ಟು ಬೇಗ ವಿಕಲಚೇತನರ ವಿಶಿಷ್ಟ ಗುರುತಿನ ಕಾರ್ಡ್ ಸಮಸ್ಯೆ ಬಗೆಹರಿಯಬೇಕು ಎಂದು ಸೂಚಿಸಿದರು.

ಬೆಳ್ತಂಗಡಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಯುಡಿಐಡಿ ಕಾರ್ಡ್ ವಿತರಣೆ ಪ್ರಗತಿ ಕುಂಠಿತವಾ ಗಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ಸಮಸ್ಯೆಯನ್ನು ಬಗೆಹರಿಸಿ, ಜಿಲ್ಲೆಯಲ್ಲಿರುವ ಒಟ್ಟು ಅಂಗವಿಕಲರ ಸಂಖ್ಯೆಗಳನ್ನು ಕಲೆ ಹಾಕಬೇಕು ಹಾಗೂ 15 ದಿನಗಳೊಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಹೇಳಿದರು.

ವಿಕಲಚೇತನರ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸುವುದು ಕಷ್ಟವಾಗಿರುವುದರಿಂದ ಆಯಾ ಶಾಲೆಗಳ ಮೂಲಕವೇ ಅರ್ಜಿಗಳನ್ನು ಸಲ್ಲಿಸಲು ಕ್ರಮವಹಿಸಲು ಹೇಳಿದರು. ವಿಕಲಚೇತನರಿಗೆ ಮಾಶಾಸನ ಸ್ಥಗಿತ ಗೊಂಡಿರುವ ಬಗ್ಗೆಯೂ ಸರಿಯಾದ ಕಾರಣಗಳನ್ನು ಹುಡುಕಿ ಪರಿಶೀಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ವಿಕಲಚೇತನ ಮಹಿಳೆ ಪ್ರಮೀಳಾ ಎಂಬವರು ಮಂಗಳೂರು ರೈಲ್ವೆ ನಿಲ್ದಾಣದ ಬಳಿರುವ ಗೂಡಂಗಡಿಯನ್ನು 2 ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ಕೆಲಸಕ್ಕಾಗಿ ತೆಗೆದುಹಾಕಲಾಗಿದೆ ಎಂದು ತಮ್ಮ ಅಳಲು ತಿಳಿಸಿದರು. ಆಗ ಜಿಲ್ಲಾಧಿಕಾರಿಯವರು ಪಾಲಿಕೆಯ ವತಿಯಿಂದ ಅಂಗವಿಕಲರಿಗೆ ನಿಗದಿಪಡಿಸಿದ ಮಾರುಕಟ್ಟೆ ಸ್ಥಳದಲ್ಲಿ ಅಂಗಡಿ ತೆರೆಯಲು ವ್ಯವಸ್ಥೆ ಮಾಡುವಂತೆ ಹೇಳಿದರು.

ಕೆಲವೊಂದು ಅಂಗವಿಕಲರ ಶಾಲೆಗಳಿಗೆ ಮೊದಲು ದೇವಾಲಯದಿಂದ ಊಟದ ವ್ಯವಸ್ಥೆ ನಡೆಯುತ್ತಿದ್ದು ಇದೀಗ ಸ್ಥಗಿತ ಗೊಂಡಿರುವ ಬಗ್ಗೆ ಸದಸ್ಯರು ತಿಳಿಸಿದರು.

ಅಂಗವಿಕಲರ ಕುಂದು ಕೊರತೆಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಜಿಲ್ಲಾ ಅಂಗವಿಕಲರ ಪುರ್ನವಸತಿ ಕೇಂದ್ರದ ಸದಸ್ಯರು, ಅಂಗವಿಕಲರ ಸಮಿತಿಯ ಅಧಿಕಾರಿಗಳು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News