ಮಂಗಳೂರು - ಜಿದ್ದಾ ನೇರ ವಿಮಾನ ಹಾರಾಟ ಆರಂಭ

Update: 2024-04-03 16:04 GMT

ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಸೌದಿ ಅರೇಬಿಯಾದ ಜಿದ್ದಾಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಹಾರಾಟ ಆರಂಭಗೊಂಡಿದೆ.

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಪರ್ಕ ಹೊಂದಿರುವ ಎಂಟನೇ ಅಂತರ್‌ರಾಷ್ಟ್ರೀಯ ತಾಣವಾಗಿದೆ ಜಿದ್ದಾ.

ತಿರುಚಿರಾಪಳ್ಳಿಯಿಂದ ಮಂಗಳೂರಿಗೆ ಆಗಮಿಸಿದ ವಿಮಾನವು ಜಿದ್ದಾಕ್ಕೆ ತೆರಳುವುದರೊಂದಿಗೆ ಮಂಗಳೂರಿನಿಂದ ಜಿದ್ದಾಕ್ಕೆ ವಿಮಾನ ಹಾರಾಟ ಅಧಿಕೃತವಾಗಿ ಆರಂಭಗೊಂಡಿತು. ತಿರುಚಿರಾಪಳ್ಳಿಯಿಂದ ಮಂಗಳೂರಿಗೆ ನೂತನವಾಗಿ ದೇಶಿಯ ವಿಮಾನ ಸಂಪರ್ಕ ಆರಂಭಗೊಂಡಿದೆ.

ತಿರುಚಿರಾಪಳ್ಳಿಯಿಂದ ಮಕ್ಕಾಕ್ಕೆ, ಪವಿತ್ರಾ ಉಮ್ರಾಗೆ ಹೊರಡುವ ಯಾತ್ರಿಕರಿಗೆ ಅನುಕೂಲವಾಗಲಿದೆ. ಜಿದ್ದಾಗೆ ತೆರಳಿದ ಮೊದಲ ವಿಮಾನದಲ್ಲಿ ಗರಿಷ್ಠ ಪ್ರಯಾಣಿಕರಿದ್ದರು.

ಈ ವಿಮಾನಕ್ಕಾಗಿ ಟಿಕೆಟ್ ಖರೀದಿಸಿದ ಮೊದಲ ಪ್ರಯಾಣಿಕರಲ್ಲಿ ಒಬ್ಬರಾದ ಉದ್ಯಮಿ ಶಬಿಹ್ ಅಹ್ಮದ್ ಕಾಝಿ ಅವರು ಮಂಗಳೂರು-ಜಿದ್ದಾ ನಡುವೆ ವಿಮಾನ ಸಂಚಾರ ಆರಂಭಿಸಿದಕ್ಕಾಗಿ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಜಿದ್ದಾಕ್ಕೆ ನೇರ ವಿಮಾನ ಸಂಪರ್ಕವು 29 ವರ್ಷಗಳ ಸುದೀರ್ಘ ಕಾಯುವಿಕೆಯು ಸಾಕಾರವಾಗಿದೆ ಎಂದು ಪ್ರಯಾಣಿಕರಾದ ನಿರ್ಮಲಾ ಕಾರ್ಡೋಜಾ ಅವರು ಹೇಳಿದ್ದಾರೆ.

ವಿಮಾನ ನಿಲ್ದಾಣದ ನಿರ್ಗಮನ ಸಭಾಂಗಣದಲ್ಲಿ ವಿಮಾನದ ಸಂಚಾರ ಉದ್ಘಾಟನೆ ಅಂಗವಾಗಿ ಹಬ್ಬದ ವಾತಾವರಣ ಇತ್ತು.

ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ ಮುಖೇಶ್ ನಂಕಣಿ ದೀಪ ಬೆಳಗಿಸುವ ಮೂಲಕ ವಿಮಾನದ ಹಾರಾಟವನ್ನು ಉದ್ಘಾಟಿಸಿದರು. ಹಬ್ಬದ ವಾತಾವರಣವನ್ನು ಹೆಚ್ಚಿಸಲು ಮೊದಲ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಅನ್ನು ಹಸ್ತಾಂತರಿಸಿಸಲಾಯಿತು.

ಉದ್ಘಾಟನಾ ಜೆದ್ದಾ ವಿಮಾನವನ್ನು ಹತ್ತಿದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ವತಿಯಿಂದ ಗುಲಾಬಿ ಹೂ, ಪ್ರಮಾಣಪತ್ರ ಮತ್ತು ವಿವಿಧ ಒಣ ಹಣ್ಣುಗಳ ಚೀಲವನ್ನು ನೀಡಲಾಯಿತು. ತಿರುಚಿರಾಪಳ್ಳಿಯಿಂದ ಆಗಮಿಸಿದ ಐಎಕ್ಸ್‌ನ 1499 ವಿಮಾನಕ್ಕೆ ವಿಮಾನ ನಿಲ್ದಾಣವು ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಕ್ಯಾಪ್ಟನ್ ಅನ್ಮೋಲ್ ದೀಪ್ ಸಿನ್ ಪಡ್ಡಾ ವಿಮಾನವನ್ನು ಹೊಸ ಸಿಬ್ಬಂದಿಯೊಂದಿಗೆ ಜಿದ್ದಾಕ್ಕೆ ಮುನ್ನಡೆಸಿದರು. ತಿರುಚಿರಾಪಳ್ಳಿಯಿಂದ ಮಂಗಳೂರು ಮೂಲಕ ಜಿದ್ದಾಕ್ಕೆ ಪ್ರತಿ ಬುಧವಾರ ವಿಮಾನ ಹಾರಾಟ ನಡೆಸಲಿದ್ದು, ಗುರುವಾರ ಈ ವಿಮಾನ ವಾಪಸಾಗಲಿದೆ.







 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News