ಸಮನ್ವಯ ಮಹಿಳಾ ಶಿಕ್ಷಣವು ಸಶಕ್ತ ಕುಟುಂಬ ವ್ಯವಸ್ಥೆಗೆ ಬುನಾದಿ: ಶಂಸುದ್ದೀನ್ ತಂಙಳ್
ಉಪ್ಪಿನಂಗಡಿ, ಎ.22: ಬಲಿಷ್ಠ ಸಮಾಜವೊಂದರ ನಿರ್ಮಾಣದಲ್ಲಿ ಕೌಟುಂಬಿಕ ವ್ಯವಸ್ಥೆಯು ಮಹತ್ವದ ಪಾತ್ರ ವಹಿಸುತ್ತದೆ. ಸಮನ್ವಯ ಶಿಕ್ಷಣ ದೊರೆತ ಮಹಿಳೆಯರಿಂದ ಸುಭದ್ರ ತಳಹದಿಯ ಸಮಾಜ ಸೃಷ್ಟಿಯಾಗುತ್ತದೆ ಎಂದು ಶಂಸುದ್ದೀನ್ ತಂಙಳ್ ಪವ್ವಲ್ ಅಭಿಪ್ರಾಯಪಟ್ಟಿದ್ದಾರೆ.
ಅವರು ರವಿವಾರ ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಕಾಲೇಜಿನ 2024-25ನೇ ಅಧ್ಯಯನ ವರ್ಷದ ವಿದ್ಯಾರ್ಥಿನಿಯರಿಗೆ ದಾಖಲಾತಿ ಫಾರಂ ವಿತರಣೆ ಸಮಾರಂಭದಲ್ಲಿ ಅಬ್ದುಲ್ ಅಝೀಝ್ ಕೆಮ್ಮಾರ ಅವರಿಗೆ ಫಾರಂ ಹಸ್ತಾಂತರಿಸಿ ಮಾತಾನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ದಾರಿಮಿ, ಸಂಸ್ಥೆಗೆ ಸಹಕಾರ ನೀಡುವ ಮೂಲಕ ಪ್ರೋತ್ಸಾಹಿಸಿದವರನ್ನು ಅಭಿನಂದಿಸಿ ಮಹಿಳೆಯರು ಕಲಿತರೆ ಅದರ ಲಾಭ ಸಮಾಜಕ್ಕೇ ಮರಳಿ ಲಭಿಸುತ್ತದೆ ಎಂದರು.
ಗಂಡಿಬಾಗಿಲು ಖತೀಬ್ ಶೌಕತ್ ಅಲಿ ಫೈಝಿ, ಪಲಿಮಾರು ಅಬ್ದುರ್ರಹ್ಮಾನ್ ಫೈಝಿ, ಪೆರಿಯಡ್ಕ ಖತೀಬ್ ಅಬ್ದುಲ್ ರಹ್ಮಾನ್ ಫೈಝಿ, ಸ್ಥಳೀಯ ಅಧ್ಯಾಪಕ ಅಬ್ದುಲ್ಲ ಉಸ್ತಾದ್, ಹಸೈನಾರ್ ಹಾಜಿ ಕೊಯಿಲ, ಹುಸೈನ್ ಬಡಿಲ, ಎನ್.ಇಸ್ಮಾಯೀಲ್ ಕೆಮ್ಮಾರ, ಇಸಾಕ್ ಎನ್. ಇಬ್ರಾಹೀಂ ಶಕ್ತಿ ನಗರ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಪವಿತ್ರ ಹಜ್ ಯಾತ್ರೆಗೆ ತೆರಳಲಿರುವ ಗಂಡಿಬಾಗಿಲು ಮಸೀದಿಯ ಪ್ರಧಾನ ಕಾರ್ಯದರ್ಶಿ ಆದಂ ಹಾಜಿ ಸನ್ಯಾಸಿಮೂಲೆ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.