ದ.ಕ ಲೋಕಸಭಾ ಕ್ಷೇತ್ರ: ಬಹಿರಂಗ ಪ್ರಚಾರಕ್ಕೆ ತೆರೆ

Update: 2024-04-24 18:31 GMT

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಎ.26ರಂದು ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರ ಬುಧವಾರ ಸಂಜೆ ಅಂತ್ಯಗೊಂಡಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿರುವ ಈ ಕ್ಷೇತ್ರದಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳು ಮತದಾರ ರನ್ನು ಸೆಳೆಯುವ ನಿಟ್ಟಿನಲ್ಲಿ ಕೊನೆಯ ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ   ಬ್ರಿಜೇಶ್ ಚೌಟ , ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ ಆರ್ ಪೂಜಾರಿ ಸೇರಿದಂತೆ ಒಟ್ಟು 9 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಮತದಾನಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ತಯರಿ ನಡೆಸಿದೆ.ಜಿಲ್ಲೆಯಾದ್ಯಂತ 1,876 ಮತಗಟ್ಟೆಗಳಿದ್ದು, 524 ಸರ್ವಿಸ್ ವೋಟರ್ ಗಳು ಸೇರಿದಂತೆ ಒಟ್ಟು 18,18,127 ಮಂದಿ ಮತದಾರರಿದ್ದಾರೆ. ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಈ ತನಕ ಗರಿಷ್ಠ ಪ್ರಯತ್ನ ನಡೆಸಿದೆ.

ಈ ಚುನಾವಣೆಯಲ್ಲಿ 2,251 ಪ್ರಿಸೈಡಿಂಗ್ ಅಧಿಕಾರಿಗಳು, 2,251 ಎಪಿಆರ್‌ಓಗಳು, 4,502 ಪಿಒಗಳು, 2,251 ಗ್ರೂಪ್ ಡಿ ನೌಕರರು ಸೇರಿದಂತೆ ಒಟ್ಟಾರೆ 11,255 ಅಧಿಕಾರಿ, ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ.

40 ಸಖಿ, ವಿಕಲಚೇತನರೇ ನಿರ್ವಹಿಸುವ 8, ವಿಷಯಾಧಾರಿತ 8, ಯುವ ಮತದಾರರ 8 ಹಾಗೂ ಪಾರಂಪರಿಕತೆ ಬಿಂಬಿಸುವ 8 ಬೂತ್ ಗಳು ಸೇರಿದಂತೆ ಒಟ್ಟಾರೆ 72 ಮಾದರಿ ಮತಗಟ್ಟೆಗಳನ್ನು ಈ ಬಾರಿ ನಿರ್ಮಿಸಲಾಗಿದೆ, ವಿಕಲಚೇತನರೇ ನಿರ್ವಹಿಸುವ ಮತಗಟ್ಟೆಗಳಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ, 1,876 ಮತಗಟ್ಟೆಗಳ ಪೈಕಿ 1,005 ಬೂತ್ ಗಳು ನಿರ್ದಿಷ್ಟ ಪ್ರದೇಶದಲ್ಲಿವೆ, 938 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ, 50 ಲೊಕೇಶನ್ ಗಳಲ್ಲಿ 132 ಪೋಲಿಂಗ್ ಸ್ಟೇಷನ್ ಬರಲಿದ್ದು, 200 ಮೈಕ್ರೋ ಒಬ್ಸರ್ವೆರ್‌ಗಳನ್ನು ನೇಮಕ ಮಾಡಲಾಗಿದೆ, ಒಟ್ಟು 171 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮಗಿಲನ್ ಎಂಪಿ ಮಾಹಿತಿ ನೀಡಿದ್ದಾರೆ.

72 ಗಂಟೆಗಳ ಅವಧಿಯಲ್ಲಿ ಮಾದರಿ ನೀತಿ ಸಂಹಿತೆಗಾಗಿ 24 ವಿಡಿಯೋ ಸರ್ವೆಲೆನ್ಸ್ ತಂಡ, 72 ಫ್ಲೈಯಿಂಗ್ ಸ್ಕ್ವಾಡ್, 69 ಸ್ಟ್ಯಾಟಿಸ್ಟಿಕ್ಸ್ ಸರ್ವೆಲೆನ್ಸ್ ತಂಡ, 186 ಸೆಕ್ಟರ್ ಅಧಿಕಾರಿಗಳು, 8 ವಿಡಿಯೋ ವಿವಿಂಗ್ ಟೀಮ್, 8 ಮಾದರಿ ನೀತಿ ಸಂಹಿತೆ ತಂಡ, 8 ವೆಚ್ಚ ನಿರ್ವಹಣಾ ತಂಡ ಹಾಗೂ 8 ಸಹಾಯಕ ಖರ್ಚು ವೆಚ್ಚಗಳ ವೀಕ್ಷಕರನ್ನು ನಿಯೋಜಿಸಲಾಗಿದೆ

ಮತಗಟ್ಟೆಗಳ ಮತದಾನ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿಗೆ ರಾತ್ರಿ ವಾಸ್ತವ್ಯಕ್ಕೆ ತೊಂದರೆಯಾಗದಂತೆ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ಫಸ್ಟ್ ಏಡ್ ಕಿಟ್, ಇತರೆ ಸೌಲಭ್ಯಗಳನ್ನು ಒದಗಿಸಲಾಗಿದೆ ಹಾಗೂ ಪೋಲಿಂಗ್ ವೇಲ್ಫಿಯರ್ ನೋಡಲ್ ಆಫೀಸರ್ ಅನ್ನು ನೇಮಕ ಮಾಡಲಾಗಿದೆ ಚುನಾವಣಾ ಕಾರ್ಯಕ್ಕೆ ಶೇ 125 ಬ್ಯಾಲೆಟ್ ಯೂನಿಟ್, ಶೇ 132 ವಿವಿಪ್ಯಾಡ್ ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಮತಗಟ್ಟೆಗಳಲ್ಲಿ ಮತದಾರರ ಸಹಾಯ ಕೇಂದ್ರ ಸೌಲಭ್ಯಕ್ಕಾಗಿ ಪ್ರತಿ ಮತಗಟ್ಟೆಗಳಲ್ಲಿ ಮತದಾರರ ಕ್ರಮ ಸಂಖ್ಯೆ ಮತ್ತು ಮತಗಟ್ಟೆಗಳನ್ನು ಗುರುತಿಸಲು ಸಹಾಯವಾಗುವಂತೆ ಬಿ ಎಲ್ ಓ ಅವರನ್ನು ಒಳಗೊಂಡ ಮತದಾರರ ಸಹಾಯ ಕೇಂದ್ರ ತೆರೆಯಲಾಗಿದೆ.

ಮನೆಮನೆ ಮತದಾನದಲ್ಲಿ 85 ವರ್ಷ ಮೇಲ್ಪಟ್ಟ 6,053 ಮತದಾರರ ಪೈಕಿ 5,878 ಮಂದಿ ಮತಚಲಾಯಿಸಿದ್ದರೆ. 1,975 ವಿಕಲಚೇತನ ಮತದಾರರ ಪೈಕಿ 1,929 ಮಂದಿ ಮತಚಲಾಯಿಸಿರುತ್ತಾರೆ. ಅಂಚೆ ಮತದಾನಕ್ಕೆ ಸಂಬಂಧಿಸಿ ದಂತೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 1,406 ನೌಕರರ ಪೈಕಿ 1,052 ಮಂದಿ ಇದು ವರೆಗೂ ಮತ ಚಲಾಯಿಸಿದ್ದಾರೆ .

ಎವಿಇಎಸ್ ವರ್ಗದಲ್ಲಿ 15 ಇಲಾಖೆಗಳ ಅಗತ್ಯ ಸೇವೆಗಳು ಎಂದು ಗುರುತಿಸಲಾಗಿದ್ದು, ಆಯಾ ಇಲಾಖೆಗಳ ಅಧಿಕಾರಿಗಳು ಮತಚಲಾಯಿಸಲು ಪ್ರತಿ ಜಿಲ್ಲೆಯಲ್ಲಿ ಪೊಸ್ಟಲ್ ವೋಟಿಂಗ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ.

ಈ ರೀತಿಯ ಒಟ್ಟು 182 ಮಂದಿ ಮತದಾರರ ಪೈಕಿ 100 ಮಂದಿ ಮತ ಚಲಾಯಿಸಿರುತ್ತಾರೆ.

*200 ಮೀಟರ್ ವ್ಯಾಪ್ತಿಯಲ್ಲಿ ಅವಕಾಶವಿಲ್ಲ: ಮತಗಟ್ಟೆಯ 200 ಮೀಟರ್ ಪ್ರದೇಶದ ಒಳಗೆ ಅಭ್ಯರ್ಥಿಗಳ ಚುನಾವಣಾ ಬೂತ್ ಸ್ಥಾಪಿಸಲು ಅವಕಾಶವಿರುವುದಿಲ್ಲ ಮತ್ತು ಚುನಾವಣಾ ಸಂಬಂಧಿಸಿದ ಪ್ರಚಾರ ಅಥವಾ ಚಟುವಟಿಕೆಗಳಿಗೆ ಅವಕಾಶ ವಿರುವುದಿಲ್ಲ ಮತದಾನದ ದಿನದಂದು ಮತಗಟ್ಟೆಯೊಳಗೆ ಮೊಬೈಲ್ ಫೋನ್ ಗಳನ್ನು ಚುನಾವಣಾ ಕರ್ತವ್ಯ ಅಧಿಕಾರಿ ಹೊರತುಪಡಿಸಿ ಉಳಿದವರು ಕೊಂಡೊಯ್ಯುವಂತಿಲ್ಲ ಅಲ್ಲದೆ ಮತದಾರರಿಗೆ ಮತಗಟ್ಟೆಗಳಲ್ಲಿಯೇ ಮೊಬೈಲ್ ಫೋನ್ ಇರಿಸಲು ಮೊಬೈಲ್ ಫೋನ್ ಡೆಪಾಸಿಟರ್ ಸೆಂಟರ್‌ಗಳನ್ನು ತೆರೆಯಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಮತಗಟ್ಟೆಯ 100 ಮೀಟರ್ ಪ್ರದೇಶದೊಳಗೆ ಯಾವುದೇ ಚುನಾವಣಾ ಪ್ರಚಾರದ ಪೋಸ್ಟರ್, ಬ್ಯಾನರ್ ಇರುವಂತಿಲ್ಲ, ಅಂತರಾಜ್ಯ ಗಡಿ ಪ್ರದೇಶಗಳಲ್ಲಿ ಎಫ್ ಎಸ್ ಟಿ ತಂಡಗಳಿಂದ ಮತ್ತು ಚೆಕ್ ಪೋಸ್ಟ್ ಗಳಲ್ಲಿ ಎಸ್‌ಎಸ್ ಟಿ ತಂಡಗಳಿಂದ ಭದ್ರತಾ ಮತ್ತು ಚುನಾವಣಾ ಅಕ್ರಮ ಚಟುವಟಿಕೆ ದೃಷ್ಟಿಯಿಂದ ಹೆಚ್ಚಿನ ಕಣ್ಗಾವಲು ಕೈಗೊಳ್ಳಲಾಗಿದೆ. ಇವಿಎಂ ಮತ್ತು ವಿವಿಪ್ಯಾಟ್ ಸಾಗಾಣಿಕ ವಾಹನಗಳಿಗೆ ಭದ್ರತಾ ಹಿತದೃಷ್ಟಿಯಿಂದ ಜಿಪಿಎಸ್ ಅಳವಡಿಸಲಾಗಿದೆ

*ವೇತನ ಸಹಿತ ರಜೆ: ಮತದಾನದ ದಿನದಂದು ಎ. 26ರಂದು ವೇತನ ಸಹಿತ ರಜೆಯನ್ನು ಸರ್ಕಾರ ಘೋಷಿಸಿದ್ದು, ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ, ನೌಕರರು ಮತದಾನ ಮಾಡಬಹು ದಾಗಿದೆ. ಎ. 24ರ ಸಂಜೆ 6 ಎಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ,

*ಸೆಕ್ಷನ್‌144 ಜಾರಿ: ಜಿಲ್ಲೆಯಾದ್ಯಂತ ಸಿಆರ್‌ಪಿಸಿ ಕಲಂ 144ರ ಅನ್ವಯ ಎಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂದಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸ ಲಾಗಿದೆ. ಅದೇ ರೀತಿ ಎ. 24ರ ಸಂಜೆ 6 ರಿಂದ ಮತದಾನ ಕೊನೆಗೊಳ್ಳುವ ಎ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News