ನೀಟ್ ಪ್ರವೇಶ ಪರೀಕ್ಷೆಯಲ್ಲಿ ಹಗರಣ: ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಉನ್ನತಮಟ್ಟದ ತನಿಖೆಗೆ ರಮಾನಾಥ ರೈ ಆಗ್ರಹ

Update: 2024-06-10 13:34 GMT

ಮಂಗಳೂರು, ಜೂ. 10: ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.

ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೀಟ್ ಫಲಿತಾಂಶ ನಾನಾ ಅನುಮಾನಗಳಿಗೆ ಕಾರಣವಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹಲವು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಹಗರಣದ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು ಎಂದರು.

ದಕ್ಷಿಣ ಕನ್ನಡದಲ್ಲಿ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಈ ಹಿಂದೆ ಸಿಇಟಿ ಇರುವಾಗ ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ದೊರೆಯುತ್ತಿತ್ತು. ಆದರೆ ನೀಟ್ ಬಂದ ಮೇಲೆ ಸ್ಥಳೀಯರಿಗೆ ಅವಕಾಶ ಸಿಗುತ್ತಿಲ್ಲ. ಅವರಿಗೆ ಅನ್ಯಾಯವಾಗಿದೆ. ಹೊರರಾಜ್ಯದ ವಿದ್ಯಾರ್ಥಿಗಳಿಗೆ ನೀಟ್ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ನೀಟ್‌ನಲ್ಲಿ ಒಂದೇ ಪರೀಕ್ಷಾ ಕೇಂದ್ರಕ್ಕೆ ಹೆಚ್ಚು ರ್ಯಾಂಕ್‌ಗಳು ಬಂದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಜೂನ್ 14ಕ್ಕೆ ಘೋಷಿಸಬೇಕಾದ ನೀಟ್ ಪರೀಕ್ಷೆಯ ಫಲಿತಾಂಶವನ್ನು ಲೋಕಸಭೆಯ ಚುನಾವಣೆಯ ಫಲಿತಾಂಶ ಹೊರಬಂದ ಜೂ.4ರಂದೇ ಪ್ರಕಟಿಸಿರುವುದು ಹಗರಣವನ್ನು ಮುಚ್ಚಿಟ್ಟು ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ನಡೆಸಿದ ಪ್ರಯತ್ನದಂತೆ ಭಾಸವಾಗುತ್ತಿದೆ ಎಂದರು.

ನೀಟ್ ವಿರುದ್ಧ ತಮಿಳುನಾಡು ರಾಜ್ಯ ಸೇರಿದಂತೆ ಬೇರೆ ಬೇರೆ ರಾಜ್ಯಗಳು ಧ್ವನಿಯೆತ್ತಿದೆ. ಅದೇ ರೀತಿ ಕರ್ನಾಟಕವೂ ಕೂಡಾ ನೀಟ್‌ನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಇತರ ರಾಜ್ಯಗಳೊಂದಿಗೆ ಕೈಜೋಡಿಸಬೇಕು. ಕರ್ನಾಟಕಕ್ಕೆ ನೀಟ್ ಬೇಡ ಹಿಂದಿನಂತೆ ಸಿಇಟಿ ಕೊಟ್ಟರೆ ಹೆಚ್ಚು ಮಂದಿಗೆ ಪ್ರಯೋಜನವಾಗುತ್ತದೆ ಎಂದು ಹೇಳಿದರು.

ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳ ಪರ ನಿಂತಿದ್ದಾರೆ. ಸಂಸತ್ತಿನಲ್ಲಿ ಧ್ವನಿಯಾಗುವುದಾಗಿ ಹೇಳಿದ್ದಾರೆ. ಅವರ ಹೋರಾಟಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿದರು.

ವಿದ್ಯಾರ್ಥಿ ಸಂಘಟನೆಗಳು ಮೌನ: ಪದ್ಮರಾಜ್

ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆಯಾಗಿದೆ. ಫಲಿತಾಂಶ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿದೆ. ಪರೀಕ್ಷೆಯಲ್ಲಿನ ಅವ್ಯವಹಾರಗಳು ವಿದ್ಯಾರ್ಥಿಗಳನ್ನು ಹತಾಶಗೊಳಿಸಿವೆ. ಈ ವಿವಾದಕ್ಕೆ ಸಂಬಂಧಿಸಿ ಎನ್‌ಎಸ್‌ಯುಐ ಹೊರತುಪಡಿಸಿ ಬೇರೆ ಯಾವುದೇ ವಿದ್ಯಾರ್ಥಿ ಸಂಘಟನೆಗಳು ಧ್ವನಿಯೆತ್ತದಿರು ವುದು ದುರದೃಷ್ಟಕರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶೀಧರ್ ಹೆಗ್ಡೆ, ಅಶ್ರಫ್ ಕೆ, ಹರೀನಾಥ್ ಕೆ, ಕಾಂಗ್ರೆಸ್ ಧುರೀಣರಾದ ಇಬ್ರಾಹೀಂ ಕೊಡಿಜಾಲ್, ಡಾ. ಶೇಖರ್ ಪೂಜಾರಿ, ಶಾಲೆಟ್ ಪಿಂಟೊ, ಸುರೇಂದ್ರ ಕಂಬಳಿ, ಜಯಶೀಲಾ ಅಡ್ಯಂತಾಯ, ನವೀನ್ ಡಿ ಸೋಜ, ಗಣೇಶ್ ಪೂಜಾರಿ, ಶಾಂತಲಾ ಗಟ್ಟಿ, ಶಬೀರ್ ಎಸ್, ಶಾಹುಲ್ ಹಮೀದ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News